ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿದ್ದರು. ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿನ್ನೆ ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ರವರು ಹೈಕೋರ್ಟ್ ಗೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ನಿನ್ನೆ ಮಧ್ಯಂತರ ಅರ್ಜಿ ಕುರಿತು ದರ್ಶನ್ ಪರ ವಕೀಲರು ವಾದ ಮಂಡನೆ ಮಾಡಿದ್ದು ಇಂದು ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್‍ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ಮಾನ್ಯ ನ್ಯಾಯಾಲಯ ವಿಧಿಸಿದೆ.
ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ದರ್ಶನ್‍ಗೆ ಹೆಚ್ಚಿನ ಷರತ್ತುಗಳನ್ನೇನೂ ನ್ಯಾಯಾಧೀಶರು ವಿಧಿಸಿಲ್ಲ. ಎಸ್‍ಪಿಪಿ ಮನವಿ ಮೇರೆಗೆ ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರದ ಒಳಗಾಗಿ ನ್ಯಾಯಾಲಯಕ್ಕೆ ಚಿಕಿತ್ಸೆಯ ವಿವರಗಳನ್ನು ಸಲ್ಲಿಸಬೇಕಿದೆ. ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದರಿಂದ ದರ್ಶನ್ ಸ್ವಲ್ಪ ಮಟ್ಟಿಗೆ ಖುಷಿಕಂಡಿದ್ದಾರೆ.










