ರಾಯಚೂರು : ಲಾರಿ ಹಾಗೂ ಮಿನಿ ಟ್ರಕ್ ನಡುವೆ ಅಪಘಾತ ಸಂಭವಿಸಿ ಐವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಶಂಶಾಬಾದ್ ಬಳಿ ನಡೆದಿದೆ. ದೇಶಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಆಗಿದ್ದು, ಈ ಹಿನ್ನೆಲೆ, ರಾಯಚೂರು ಮೂಲದ ರಸ್ತೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು, ಹೀಗಾಗಿ ಸೂರ್ಯಪೇಟೆಯಿಂದ ಮಿನಿ ಟ್ರಕ್‍ನಲ್ಲಿ ಒಟ್ಟು 30 ಜನರು ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಶಂಶಾಬಾದ್ ಬಳಿ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೂವರು ಮಹಿಳೆಯರು, ಬಾಲಕಿ ಹಾಗೂ ಬಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಇನ್ನೂ 6 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಲಾರಿ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಶಂಶಾಬಾದ್ ಗ್ರಾಮೀಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.










