ಉಡುಪಿ : ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಲಾಕ್ ಡೌನ್ ಪ್ಯಾಕೇಜ್ ನಲ್ಲಿ ಹಿಂದುಳಿದ ವರ್ಗ, ಪ್ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿಯನ್ನು ಕಾಪಾಡದೇ ನಿರ್ಲಕ್ಷಿಸಿರುವುದು ತೀರಾ ವಿಷಾದನೀಯ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದ್ದಾರೆ.
ಪ್ರಮುಖ ಹಿಂದುಳಿದ ವರ್ಗಗಳಲ್ಲೊಂದಾದ ಬಿಲ್ಲವ ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಹಣಕಾಸು ನೆರವನ್ನು ನೀಡಿ ಸ್ತ್ರೀ-ಶಕ್ತಿ ಸ್ವ-ಸಹಾಯ ಸಂಘಗಳನ್ನು ಉತ್ತೇಜಿಸುವ ಆಶ್ವಾಸನೆ ಕಾರ್ಯಗತಗೊಂಡಿದ್ದರೆ ಈ ಸಂದರ್ಭದಲ್ಲಿ ಪ್ರಯೋಜನವಾಗುತ್ತಿತ್ತು. ಆದರೆ ಇಂದಿಗೂ ಘೋಷಣೆಯೂ ಆಗದೆ ಕಾರ್ಯಗತವೂ ಆಗದೆ ಕೇವಲ ಆಶ್ವಾಸನೆಯಾಗಿಯೇ ಉಳಿಯುವ ಮೂಲಕ ಹಾಗೂ ಲಾಕ್ ಡೌನ್ ಪ್ಯಾಕೇಜ್ ನಲ್ಲಿಯೂ ಬಿಲ್ಲವ ಸಮುದಾಯ ವನ್ನು ಕಡೆಗಣಿಸಲಾಗಿದೆ.ಅಲ್ಲದೇ ಮೀನು ವ್ಯಾಪಾರ ನಡೆಸುವ ಇತರ ವೃತ್ತಿಭಾಂದವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದೆ ದ್ರೋಹವೆಸಲಾಗಿದೆ. ತಮ್ಮ ಕುಲ ಕಸುಬನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿರುವ ಕುಂಬಾರ ಸಮಾಜಕ್ಕೆ ಹಾಗೂ ಮರದ ಕೆಲಸ ಮತ್ತು ಕಬ್ಬಿಣದ ಕೆಲಸ ಮಾಡಿ ದುಡಿಮೆ ಮಾಡುತ್ತಿದ್ದ ವಿಶ್ವಕರ್ಮ ಸಮಾಜ ಬಾಂಧವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಅದೇ ರೀತಿ ಹಿಂದುಳಿದ ವರ್ಗಗಳ ಜಾತಿಗಳಾದ ಶೆಟ್ಟಿಗಾರ,ಗಾಣಿಗ ಮತ್ತು ಜೋಗಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಾಗೂ ಬೀಡಿ ಕಾರ್ಮಿಕರಿಗೆ ಮತ್ತು ಎಲ್ಲಾ ಸಮಾಜದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಪ್ಯಾಕೇಜ್ ನೀಡದೆ ಕಡೆಗಣಿಸಲಾಗಿದೆ ಅದೇ ರೀತಿ ದೇವಸ್ಥಾನ, ಗರಡಿಗಳಲ್ಲಿ ಕೆಲಸ ಮಾಡುವ ಅರ್ಚಕರು ಮತ್ತು ಚಾಕರಿ ಮಾಡುವವರನ್ನು ಹಾಗೂ ನಲ್ಕೆಯವರನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಸಹಾಯಧನವನ್ನು ಘೋಷಿಸದೇ ವಂಚಿಸಲಾಗಿದೆ.
ಮುಖ್ಯಮಂತ್ರಿಗಳು ರೂ.1250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆಂದು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ವೈಭವೀಕರಿಸುತ್ತಿದ್ದು, ನೆರೆಯ ಹಾಗೂ ಅತಿ ಸಣ್ಣ ರಾಜ್ಯವಾದ ಕೇರಳದಲ್ಲಿ ರೂ 20,000 ಕೋಟಿ ಪ್ಯಾಕೇಜನ್ನು ಜನಸಾಮಾನ್ಯರಿಗೆ ನೀಡಿದ್ದು ಇದನ್ನು ಮುಖ್ಯಮಂತ್ರಿಗಳು ತಿಳಿಯಬೇಕಾಗಿದೆ. ಪ್ಯಾಕೇಜ್ ಹಣವನ್ನು ಮುಖ್ಯಮಂತ್ರಿಗಳು ಅಥವಾ ಸಚಿವರ ಕೈಯಿಂದ ನೀಡುತ್ತಿಲ್ಲ ಇದು ಜನರ ತೆರಿಗೆ ಹಣದಿಂದ ನೀಡುವಂತದ್ದು. ಆದ್ದರಿಂದ ಶೀಘ್ರ ಕಾರ್ಯಗ್ರತಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಪ್ಯಾಕೇಜ್ ಪಡೆಯಲು ನಿಗದಿಪಡಿಸಿರುವ ಅರ್ಹತೆ ಮತ್ತು ನಿಯಮಗಳನ್ನು ಸಡಿಲುಪಡಿಸಬೇಕು ಇಲ್ಲವಾದಲ್ಲಿ ಒಟ್ಟು 10 ಶೇಕಡಾ ಫಲಸನುಭವಿಗಳಿಗೂ ತಮ್ಮ ಪ್ಯಾಕೇಜ್ ತಲುಪುವುದು ಕಷ್ಟಕರ. ಯಾಕೆಂದರೆ ಮೊದಲನೆಯ ಅಲೆಯ ಲಾಕ್ದೌನ್ ಪ್ಯಾಕೇಜ್ ಇನ್ನೂ ಕೂಡ ಪರಿಣಾಮಕಾರಿಯಾಗಿ ಕಾರ್ಯಗತಗೊಂಡಿಲ್ಲದ ಕಾರಣ, ಅದರಂತೆ ಎರಡನೇ ಅಲೆಯ ಪ್ಯಾಕೇಜ್ ಕೂಡಾ ಘೋಷನೆಯಾಗಿಯೇ ಉಳಿಯದೆ ರೋಗ ಹತೋಟಿ ಯೊಂದಿಗೆ ಸಾರ್ವಜನಿಕರ ಹಸಿವು ನೀಗಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ವಿನಯ್ ಕುಮಾರ್ ಸೊರಕೆಯವರು ಆಗ್ರಹಿಸಿದ್ದಾರೆ.










