ನವದೆಹಲಿ : ಮೇವು ಹಗರಣ ಪ್ರಕರಣದಲ್ಲಿ ಕಳೆದ ಕೆಲವು ವಾರಗಳ ಹಿಂದಷ್ಟೇ ಜಾಮೀನು ಪಡೆದು ಲಾಲು ಪ್ರಸಾದ್ ಯಾದವ್ ಜೈಲಿನಿಂದ ಹೊರ ಬಂದಿದ್ದರು. ಇದೀಗ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮತ್ತೆ ಶಾಕ್ ನೀಡಿದ್ದು, ಅವರಿಗೆ ಸಂಬಂಧಿಸಿದ 15 ಸ್ಥಳಗಳ ಮೇಲೆ ದಾಳಿ ಮಾಡಿ, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ಮತ್ತು ಮಗಳು ಮಿಸಾಗೆ ಸಂಬಂಧಿಸಿದ ಸ್ಥಳಗಳೂ ಸೇರಿದಂತೆ ಬಿಹಾರ ಮತ್ತು ದೆಹಲಿಯ ಹಲವು ಸ್ಥಳಗಳಲ್ಲಿ ತನಿಖಾಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಲಾಲು 2004 ರಿಂದ 2009 ರವರೆಗೆ ರೈಲ್ವೆ ಸಚಿವರಾಗಿದ್ದರು. ಈ ಅವಧಿಯಲ್ಲಿ ಉದ್ಯೋಗಕ್ಕಾಗಿ ಪ್ರತಿಯಾಗಿ ನಿರ್ದಿಷ್ಟ ಭೂಮಿ ಅಥವಾ ನಿವೇಶನಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಲಾಲು ಮತ್ತು ಮಗಳ ವಿರುದ್ಧ ಕೇಳಿಬಂದಿದ್ದು, ಹೊಸ ಪ್ರಕರಣ ದಾಖಲಾಗಿದೆ.
ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಪುತ್ರಿ ವಿರುದ್ಧ ಹೊಸ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ದಾಖಲಿಸಿದ್ದು, ಈ ಸಂಬಂಧ ಪ್ರಾಥಮಿಕ ತನಿಖೆ ಆರಂಭಿಸಿ ಅದನ್ನು ಎಫ್ಐಆರ್ ಆಗಿ ಪರಿವರ್ತಿಸಿದೆ ಎಂದು ವರದಿಗಳು ತಿಳಿಸಿವೆ.










