ವರುಣನ ಅಬ್ಬರ – ರಾಜ್ಯದ ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ…

70
firstsuddi

ಕೊಡಗು/ಉಡುಪಿ/ಚಿಕ್ಕಮಗಳೂರು : ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದೂ ಕೂಡ ಎಲ್ಲ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕೂಡ ಭಾರೀ ಮಳೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಇಂದಿನಿಂದ 9ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನೊಂದೆಡೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಗಾಗಿ ತೀವ್ರ ಶೋಧ ಮುಂದುವರೆದಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಬೆಂಗಳೂರಿನಿಂದ ಎಸ್ ಡಿಆರ್ ಎಫ್ ತಂಡ ಆಗಮಿಸಿದೆ.

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು, ಮೊಬೈಲ್ ನೆಟ್ ವರ್ಕ್ ಸಿಗದಂತಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಕಳೆದೆರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಮಡಿಕೇರಿ ವಿರಾಜಪೇಟೆ ಸಂಪರ್ಕ ಕಲ್ಪಿಸುವ ಬೇತ್ರಿ ನದಿಯಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ. ಮಳೆ ಹಿನ್ನೆಲೆ ಇಂದು ಕೊಡಗಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉಡುಪಿಯಲ್ಲೂ ವರುಣನ ಆರ್ಭಟ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಕೂರ್ಮರಾವ್ ಆದೇಶಿಸಿದ್ದಾರೆ. ಭಾರಿ ಮಳೆ ಸಾಧ್ಯತೆ ಇದ್ದು ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಶಾಲಾ, ಕಾಲೇಜುಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.