ವಿಜಯಪುರ : ಜಿಲ್ಲೆಯ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ. ತಡರಾತ್ರಿ ಜಲನಗರದ ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲಿಗೆ ಹತ್ತಕ್ಕೂ ಅಧಿಕ ಸಾವರ್ಕರ್ ಫೋಟೋಗಳನ್ನು ಅಂಟಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಲನಗರ ಠಾಣೆ ಪೊಲೀಸರು ಫೋಟೋಗಳನ್ನು ತೆರವು ಮಾಡಿದ್ದಾರೆ. ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸದ್ಯ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಫೋಟೋ ಅಂಟಿಸಿದ ಕಿಡಿಗೇಡಿಗಳ ಪತ್ತೆಕಾರ್ಯ ನಡೆಯುತ್ತಿದೆ.
ಕಾಂಗ್ರೆಸ್ ಕಚೇರಿ ಪ್ರವೇಶ ದ್ವಾರ, ಕಿಟಕಿ, ಗೋಡೆಗಳಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ್ ಹೂಗಾರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ತೆರವು ಮಾಡಿದ್ದಕ್ಕೆ ಪ್ರತಿಯಾಗಿ ನಾನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೋಟೋ ಹಚ್ಚಿದ್ದೇನೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಮಡಿಕೇರಿ ಪ್ರವಾಸ ಕೈಗೊಂಡಿದ್ದಾಗ ಸಾವರ್ಕರ್ ಫೋಟೋ ಪ್ರದರ್ಶಿಸಿ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಆ ಬಳಿಕ ಸಾವರ್ಕರ್ ಫೋಟೋ ಎಲ್ಲೆಡೆ ಕಂಡು ಬರುತ್ತಿದ್ದು, ಇದೀಗ ಕಾಂಗ್ರೆಸ್ ಕಚೇರಿಯ ಮುಂಭಾಗ ಸಾವರ್ಕರ್ ಫೋಟೋ ಅಂಟಿಸಿದ ಕಾರಣ ಮತ್ತಷ್ಟು ವಿವಾದ ಭುಗಿಲೆದ್ದಿದೆ.










