ಕೊಟ್ಟಿಗೆಹಾರ : ಬಣಕಲ್ ಸಮೀಪದ ಕೋಳೂರು ಸಾವಿರದ ಪಲ್ಗುಣಿ ಕಲಾನಾಥೇಶ್ವರ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ರಥವನ್ನು ಹೂ ಮತ್ತು ವಿದ್ಯುತ್ ಅಲಂಕಾರಗಳಿಂದ ಶೃಂಗರಿಸಲಾಗಿತ್ತು. ಪ್ರಾರ್ಥನಾ ಪೂಜೆ, ಗಣಪತಿ ಹೋಮ, ಅಂಕುರಾರ್ಪಣೆ, ಧ್ವಜಾರೋಹಣ, ರಥರೋಹಣ ಕಾರ್ಯಕ್ರಮ ನಡೆದವು. ಅಲಂಕೃತ ರಥದಲ್ಲಿ ಕಲಾನಾಥೇಶ್ವರ ಸ್ವಾಮಿಯನ್ನು ಕೂರಿಸಿ ಸಹಸ್ರಾರು ಜನಗಳ ಸಮ್ಮುಖದಲ್ಲಿ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ರಥವನ್ನು ಎಳೆಯುವ ಮೂಲಕ ರಥೋತ್ಸವ ನಡೆಯಿತು.
ಇಂದು ಕಲಾನಾಥೇಶ್ವರ ಸ್ವಾಮಿಗೆ ಅವಭೃತ ಸ್ನಾನ, ಉತ್ಸವ ಪೂಜೆಗಳನ್ನು ಸಮರ್ಪಿಸುವ ಮೂಲಕ ಉತ್ಸವದ ಸಂಪ್ರದಾಯ ನಡೆಯಿತು. ನಂತರ ವಿಶೇಷ ಉತ್ಸವದ ಪೂಜೆಯ ಬಳಿಕ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.
ವಾರ್ಷಿಕ ಉತ್ಸವದ ಅಂಗವಾಗಿ ಪದ್ಮಾವತಿ ಅಮ್ಮನವರಿಗೂ ವಿಶೇಷ ಪೂಜೆ ನಡೆಯಿತು. ಶಾಸಕ ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ, ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಆರ್.ಸುದೀರ್ ಗೌಡ, ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.










