ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿ ಮೆರೆದ ಜಿಲ್ಲಾಧಿಕಾರಿ.

78
firstsuddi

ಚಿಕ್ಕಮಗಳೂರು : ಜಿಲ್ಲಾಡಳಿತದ ಬಿಡುವಿಲ್ಲದ ಕಾರ್ಯಭಾರಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಇಂದು ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿ ಪಿಯು ವಿದ್ಯಾರ್ಥಿಗಳಿಗೆ ಸ್ವತಃ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿಯನ್ನು ಮೆರೆದರು.

ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಗಳನ್ನು ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳಿಗೆ ಒಂದು ದಿನ ಪಾಠ ಮಾಡುವಂತೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಇಂದು ಬೆಳಿಗ್ಗೆ ಕಾಲೇಜಿಗೆ ತೆರಳಿ ಮೂರು ಗಂಟೆಗೂ ಅಧಿಕ ಕಾಲ ಪಿಯು ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕುರಿತು ಸುಧೀರ್ಘವಾಗಿ ಪಾಠ ಮಾಡಿದರು.

ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕಗ್ಗಂಟುಗಳನ್ನು ವಿದ್ಯಾರ್ಥಿಗಳೆದುರು ಎಳೆಎಳೆಯಾಗಿ ಬಿಡಿಸಿಟ್ಟ ಜಿಲ್ಲಾಧಿಕಾರಿ ಪೂರಕವಾದ ಉಪಮೆಗಳು, ಕಥೆಗಳನ್ನು ಮನಮುಟ್ಟುವಂತೆ ವಿವರಿಸುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಟ್ಟರು.

ತಾವೊಬ್ಬ ಜಿಲ್ಲಾಧಿಕಾರಿ ಎಂಬುದನ್ನು ಬದಿಗಿಟ್ಟು ವಿದ್ಯಾರ್ಥಿಗಳೊಂದಿಗೆ ಪ್ರೀತಿ ವಿಶ್ವಾಸ ಮತ್ತು ಸ್ನೇಹದಿಂದ ಮಾತನಾಡಿದ ಅವರು ಕಲಿಕೆಯಲ್ಲಿ ಯಶಸ್ವಿಯಾಗುವಲ್ಲಿನ ಒಳಮರ್ಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸುವ ಮೂಲಕ ತಾವೊಬ್ಬ ಉತ್ತಮ ಬೋಧಕ ಎಂಬುದನ್ನು ಸಾಬೀತುಪಡಿಸಿದರು.

ಕಾನ್ಸೆಪ್ಟ್ ಅರ್ಥವಾದರೆ ಕಲಿಕೆ ಸುಲಭವಾಗುತ್ತದೆ, ವಿದ್ಯಾರ್ಥಿಗಳು ಎಲ್ಲವನ್ನೂ ಒಂದೇ ಸಲ ತಲೆಯಲ್ಲಿ ತುಂಬಿಕೊಳ್ಳಬಾರದು, ಎಷ್ಟು ಬೇಕೋ ಅಷ್ಟು ಸ್ವಲ್ಪ ಸ್ವಲ್ಪವಾಗಿ ವಿಷಯಗಳನ್ನು ತುಂಬಿಕೊಳ್ಳಬೇಕು, ವಿಜ್ಞಾನ ಅಧ್ಬುತಗಳ ಆಗರ, ಮುಕ್ತಮನಸ್ಸಿನಿಂದ ಅಭ್ಯಾಸ ಮಾಡಿದರೆ ಅದರ ದರ್ಶನವಾಗುತ್ತದೆ ಮತ್ತು ಅರ್ಥವಾಗುತ್ತದೆ ಎಂದು ತಿಳಿ ಹೇಳಿದರು.

ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ಮಾತನಾಡಿ ಆಡಳಿತ ಮಂಡಳಿ ಮತ್ತು ತಮ್ಮ ಮನವಿಗೆ ಓಗೊಟ್ಟು ಆಗಮಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾಲೇಜಿಗೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪ್ರಾಚಾರ್ಯೆ ಎಂ.ಬಿ.ಜಯಶ್ರೀ ಮತ್ತು ಬೋಧಕ ವೃಂದ ಸಂಭ್ರಮದಿಂದ ಸ್ವಾಗತಿಸಿತು, ವಾಣಿಜ್ಯ ವಿಭಾಗದ ಮುಖ್ಯಸ್ಥ ಮಂಜುನಾಥ ಭಟ್, ವಿಜ್ಞಾನ ವಿಭಾಗದ ಮುಖ್ಯಸ್ಥ ಗೋಪಾಲ್, ಉಪನ್ಯಾಸಕರಾದ ಹೆಚ್.ಕೆ.ಸುಭಾಷ್, ಡಿ.ರಾಜಕುಮಾರ್ ಉಪಸ್ಥಿತರಿದ್ದರು.