ಉತ್ತರ ಪ್ರದೇಶದಲ್ಲಿ ಇನ್ಮುಂದೆ ಅತ್ಯಾಚಾರ ಆರೋಪಿಗಳಿಗೆ ಸಿಗಲ್ಲ ನಿರೀಕ್ಷಣಾ ಜಾಮೀನು.. ಮಸೂದೆ ಅಂಗೀಕಾರ

81
firstsuddi

ಲಕ್ನೋ : ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಗಂಭೀರ ಅಪರಾಧಗಳ ಪ್ರಕರಣಗಳಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗದಂತೆ ನೋಡಿಕೊಳ್ಳಲು ಯೋಗಿ ಸರ್ಕಾರವು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022 ಅನ್ನು ಅಂಗೀಕರಿಸಿದೆ. ಈ CrPC ತಿದ್ದುಪಡಿ ಮಸೂದೆಯ ಪ್ರಕಾರ, ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗುವವರಿಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ.

ಈ ಮಸೂದೆಯು ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳಲ್ಲಿ ನಿರೀಕ್ಷಣಾ ಜಾಮೀನು ಲಭ್ಯವಾಗದಿರುವುದು ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಸದನಕ್ಕೆ ತಿಳಿಸಿದರು. ಈ ನಿಬಂಧನೆಯು ಆರೋಪಿಗಳು ಸಂತ್ರಸ್ತೆ ಮತ್ತು ಇತರ ಸಾಕ್ಷಿಗಳನ್ನು ಹೆದರಿಸುವುದು ಅಥವಾ ಕಿರುಕುಳ ನೀಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಅಸೆಂಬ್ಲಿ ಮತ್ತೊಂದು ಮಸೂದೆಯನ್ನು ಕೂಡ ಅಂಗೀಕರಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಾತಿ (ತಿದ್ದುಪಡಿ) ಮಸೂದೆ, 2022ಯನ್ನು ಅಂಗೀಕರಿಸಿದೆ. ಗಲಭೆಯಲ್ಲಿ ಸತ್ತವರಿಗೆ 5 ಲಕ್ಷ ರೂ. ಪರಿಹಾರ ನೀಡಲು ತಿದ್ದುಪಡಿ ಮಸೂದೆಯು ಹಕ್ಕು ನ್ಯಾಯಮಂಡಳಿಗೆ ಅಧಿಕಾರ ನೀಡುತ್ತದೆ. ಪರಿಹಾರದ ಹಣವನ್ನು ತಪ್ಪಿತಸ್ಥ ವ್ಯಕ್ತಿಯಿಂದ ವಸೂಲಿ ಮಾಡಲಾಗುವುದು ಎಂದು ಸಚಿವ ಖನ್ನಾ ಹೇಳಿದ್ದಾರೆ.