ರಾಯಚೂರು : ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಾಲೆಯೊಂದರ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಕ್ತಿನಗರ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿರುವ ವಿ.ಕೆ.ಅಂಗಡಿ ಈ ಪ್ರಕರಣದ ಆರೋಪಿ. ವಿದ್ಯಾರ್ಥಿನಿಯ ಮೊಬೈಲ್ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್ ಮೆಸೇಜ್‌ಗಳಿಂದ ಕಾಮುಕ ಮುಖ್ಯೋಪಾಧ್ಯಾಯನ ಬಣ್ಣ ಬಯಲಾಗಿದೆ.
ಹೇಳಿದ ಹಾಗೆ ಕೇಳದಿದ್ದರೆ ಪರೀಕ್ಷೆ ಆದ ಮೇಲೆ ಏನಾಗುತ್ತದೆ ನೋಡು ಎಂದು ಮುಖ್ಯೋಪಾಧ್ಯಾಯ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿನಗೆ ಒಳ್ಳೆಯ ಆಫರ್ ಕೊಡುತ್ತೇನೆ. ನನ್ನ ಮನೆಗೆ ಒಂದು ಗಂಟೆ ಬಂದು ಹೋಗು ಎಂದು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಮುಖ್ಯೋಪಾಧ್ಯಾಯನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ವಿಷಯ ತಿಳಿದ ವಿದ್ಯಾರ್ಥಿನಿಯ ಪೋಷಕರು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.
ಶಕ್ತಿನಗರ ಪೊಲೀಸರು ರಾಯಚೂರು ಮಹಿಳಾ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ 20/2023 ಕಲಂ 354(ಎ), (ಸಿ) ಐಪಿಸಿ ಮತ್ತು 8, 12, ಪೋಕ್ಸೋ ಕಾಯ್ದೆ ಹಾಗೂ 3(1)(ಆರ್)(ಯು)(ವಿ) ಎಸಿ/ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.










