ವಿಶ್ವವಿಖ್ಯಾತ ಮೈಸೂರು ದಸರಾಗೆ ರಾಷ್ಟ್ರಪತಿಯಿಂದ ವಿದ್ಯುಕ್ತ ಚಾಲನೆ…

62
firstsuddi

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಇಂದು ಬೆಳಗ್ಗೆ 9.45 ರಿಂದ 10.05ರ ವೃಶ್ಚಿಕ ಲಗ್ನದಲ್ಲಿ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ಲಭಿಸಿತು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ನಾಡಹಬ್ಬ ದಸರಾವನ್ನು ಉದ್ಘಾಟನೆ ಮಾಡುತ್ತಿರುವುದು ವಿಶೇಷವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರದ ಹಲವು ಸಚಿವರು, ರಾಜ್ಯದ ಸಚಿವರು ವೇದಿಕೆಯಲ್ಲಿದ್ದರು.

ಎಲ್ಲಾ ಸಹೋದರ – ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಮುರ್ಮು ಹಿಂದೆ ಗಣೇಶನ ಹಬ್ಬದ ಸಂದರ್ಭದಲ್ಲಿ ನಾನು ಕರ್ನಾಟಕಕ್ಕೆ ಬಂದಿದ್ದೆ. ಈಗ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಇದು ಆದಿಶಕ್ತಿಯ ಸ್ಥಾನ. ಅಧ್ಯಾತ್ಮಿಕವಾಗಿ ಉನ್ನತ ಸ್ಥಾನ ಪಡೆದಿರುವ ದೇವಿಯ ಸ್ಥಳ ಇದು. ಹೀಗಾಗಿಯೇ ದೂರದೂರದಿಂದಲೂ ಜನರು ದೇವಿಯ ದರ್ಶನಕ್ಕಾಗಿ ಬರುತ್ತಾರೆ ಎಂದು ಹೇಳಿದರು.

ಕರ್ನಾಟಕವು ಮಹಿಳಾ ಸಮಾನತೆಗೂ ಹೆಸರುವಾಸಿ. ಮಹಿಶಾಸುರ ಸೇರಿದಂತೆ ಹಲವು ರಾಕ್ಷಸರನ್ನು ದೇವಿ ಸಂಹಾರ ಮಾಡಿ ಜನರನ್ನು ರಕ್ಷಿಸಿದ್ದಾಳೆ. ದೇವಿಯು ಶಕ್ತಿಸ್ವರೂಪಳೂ ಹೌದು, ತಾಯಿಯಾಗಿ ಭಕ್ತರನ್ನು ಕಾಪಾಡುವ ತಾಯಿ ಸ್ವರೂಪಳೂ ಹೌದು. ದಸರಾ ಎನ್ನುವುದು ಸ್ತ್ರೀಶಕ್ತಿಯ ಆರಾಧನೆ ಮಾಡುವ ಹಬ್ಬ. ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮಾ, ಓಬವ್ವರಂಥ ಮಹಾನ್ ಹೋರಾಟಗಾರ್ತಿಯರು ಇದ್ದ ನಾಡು. ಮಹಿಳೆಯರು ಹಲವು ಆಯಾಮಗಳಲ್ಲಿ ಈಗ ಪ್ರಗತಿ ತೋರುತ್ತಿದ್ದಾರೆ. ಅವರಿಗೆ ನಾವು ಇನ್ನಷ್ಟು ಬಲ ತುಂಬಬೇಕಿದೆ ಎಂದರು.