ಇದೇ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ಆಸ್ತಿ ಬಹಿರಂಗ – ಎಷ್ಟು ಗೊತ್ತಾ?

69
firstsuddi

ಹೈದರಾಬಾದ್ : ವಿಶ್ವದ ಅತಿ ಶ್ರೀಮಂತ ಹಿಂದೂ ದೇವಾಲಯ ಎಂಬ ಖ್ಯಾತಿ ತಿರುಮಲ ತಿರುಪತಿ ದೇವಸ್ಥಾನ ಪಡೆದುಕೊಂಡಿದೆ. ಇದೀಗ ತಿಮ್ಮಪ್ಪನ ಆಸ್ತಿ ಎಷ್ಟಿದೆ ಎನ್ನುವುದನ್ನು ಟಿಟಿಡಿ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ.

ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬರಾವ್ ನೀಡಿದ ಮಾಹಿತಿ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇವಾಲಯ, ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರೂಪಾಯಿ ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ. ಅಲ್ಲದೇ ದೇಶದ ವಿವಿಧ ಕಡೆ ಒಟ್ಟು 7123 ಎಕರೆ ಪ್ರದೇಶದಲ್ಲಿ ತಿರುಪತಿ ದೇಗುಲದ 960 ಸ್ಥಿರಾಸ್ತಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಕೇವಲ ಆಸ್ತಿ ಮಾತ್ರವಲ್ಲ ದೇಶದ ವಿವಿಧ ಸರ್ಕಾರಿ ಬ್ಯಾಂಕ್ ಗಳಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಠೇವಣಿ ಮಾಡಲಾಗಿದೆ. ಅಲ್ಲದೇ ಪ್ರಮುಖವಾಗಿ, ತಿಮ್ಮಪ್ಪನ ಭಂಡಾರದಲ್ಲಿ 14 ಸಾವಿರ ಕೇಜಿ ಚಿನ್ನ ಇದೆ.

ದೇಗುಲದ ಆಡಳಿತದಲ್ಲಿ ಪಾರದರ್ಶಕತೆ ತರಲು 2020ರಲ್ಲೇ ದೇಗುಲದ ಆಸ್ತಿ ಕುರಿತು ಶ್ವೇತಪತ್ರ ಹೊರಡಿಸಲು ಟಿಟಿಡಿ ನಿರ್ಧರಿಸಿತ್ತು. ಆದರೆ ಕೋವಿಡ್‌ ಮತ್ತಿತರ ಕಾರಣಗಳಿಂದಾಗಿ ಆಸ್ತಿ ಸಮೀಕ್ಷೆ ಮತ್ತು ಸರ್ವೇ ಸಾಧ್ಯವಾಗಿರಲಿಲ್ಲ. ಇದೀಗ ಆ ಕಾರ್ಯ ಪೂರ್ಣಗೊಂಡಿದ್ದು, ಆಸ್ತಿ ಬಹಿರಂಗಪಡಿಸಿದೆ.