ವೇದಿಕೆ ಮೇಲೆಯೇ ನಟನಿಗೆ ಕಪಾಳಮೋಕ್ಷ – ವಿಲ್​ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್…

74
firstsuddi

ಲಾಸ್ ಏಂಜಲೀಸ್(ಅಮೆರಿಕ): ಅಮೆರಿಕದ ಲಾಸ್ ಏಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ಹಾಸ್ಯನಟ ಕ್ರಿಸ್ ರಾಕ್ ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ ಸ್ಮಿತ್‍ ಅವರನ್ನು 10 ವರ್ಷಗಳ ಕಾಲ ಆಸ್ಕರ್ ನಿಂದ ನಿಷೇಧಿಸಲು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

ಲಾಸ್ ಏಂಜಲೀಸ್ ನಲ್ಲಿ ನಿನ್ನೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಸ್ಮಿತ್ ಕಳೆದ ವಾರ ಅಕಾಡೆಮಿಯಿಂದ ನಿವೃತ್ತಿ ಘೋಷಿಸಿದ್ದರು.

ಆಸ್ಕರ್ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಶುಕ್ರವಾರ(ನಿನ್ನೆ) ಆಸ್ಕರ್ ನಲ್ಲಿ ವಿಲ್ ಸ್ಮಿತ್ ಅವರ ರಾಜೀನಾಮೆ ಕುರಿತು ಚರ್ಚಿಸಲು ಆಡಳಿತ ಮಂಡಳಿಯು ಸಭೆಯನ್ನು ಕರೆದಿತ್ತು. 2022 ಏಪ್ರಿಲ್ 8 ರಿಂದ 10 ವರ್ಷಗಳ ಅವಧಿಗೆ ವಿಲ್ ಸ್ಮಿತ್ ಅವರನ್ನು ಅಕಾಡೆಮಿ ನಿಷೇಧ ಮಾಡಿದೆ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಒಳಗೊಂಡಂತೆ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಸ್ಮಿತ್ ಗೆ ಅನುಮತಿ ನೀಡಬಾರದು ಎಂದು ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.