ನವದೆಹಲಿ : ಅತೃಪ್ತ ಶಾಸಕರು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರ ನೇತೃತ್ವದಲ್ಲಿ ನಡೆಯಿತು. ಅತೃಪ್ತ ಶಾಸಕರ ಪರವಾಗಿ ಮೊದಲು ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಶಾಸಕರು ತಮ್ಮ ಕೈ ಬರಹದ ಮೂಲಕವೇ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಸ್ಪೀಕರ್ ಅವರ ನಿರ್ಧಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಬಹುದಾಗಿದೆ. ಇಬ್ಬರು ಶಾಸಕ ಮೇಲೆ ಅನರ್ಹತೆ ಪ್ರಕ್ರಿಯೆ ಬಾಕಿ ಇದೆ. ಶಾಸಕರ ರಾಜೀನಾಮೆ ಸ್ವೀಕರಿಸಲು ಅನರ್ಹತೆ ಪ್ರಕ್ರಿಯೆ ಬಾಕಿ ಇರುವುದು ಅಡ್ಡಿಯಾಗುವುದಿಲ್ಲ. ಈ ಹಿಂದೆ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡುವ ಸಮಯದಲ್ಲಿ ಉಮೇಶ್ ಜಾಧವ್ ಅವರ ಮೇಲೆ ಅನರ್ಹತೆ ದೂರು ಇದ್ದರೂ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅದರಂತೆ ಶಾಸಕರ ರಾಜೀನಾಮೆಯೂ ಅಂಗೀಕಾರವಾಗಲಿ.
ಎಲ್ಲಾ ಅತೃಪ್ತ ಶಾಸಕರು ಖುದ್ದಾಗಿ ತಮ್ಮ ತೀರ್ಮಾನವನ್ನು ತಿಳಿಸಿ ಕೈ ಬರಹದಲ್ಲೇ ರಾಜೀನಾಮೆಯನ್ನು ನೀಡಿದ್ದಾರೆ. ಉಮೇಶ್ ಜಾಧವ್ ಅವರು ಮಾರ್ಚ್ 4ರಂದು ರಾಜೀನಾಮೆ ಸಲ್ಲಿಸಿದ್ದು, ಏಪ್ರಿಲ್ 1ಕ್ಕೆ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಈಗಾ ಯಾಕೆ ವಿಚಾರಣೆ ನಡೆಸುತ್ತಿದ್ದಾರೆ? ಹೊಸದಾಗಿ ಅರ್ಜಿ ಸಲ್ಲಿಸಿರುವ 5 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಉಳಿದ ಶಾಸಕರ ಅನರ್ಹತೆ ಯಾಕೆ ಮಾಡಬೇಕು? ಅನರ್ಹತೆಯಾಗುವ ತಪ್ಪು ಶಾಸಕರು ಮಾಡಿಲ್ಲ. ರಾಜೀನಾಮೆ ಸಲ್ಲಿಸಿದರೆ ಅನರ್ಹತೆ ಪ್ರಶ್ನೆ ಇಲ್ಲಿ ಬರುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಶಾಸಕರು ಭಾಗಿಯಾಗಿಲ್ಲ. ಶಾಸಕರ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತೇನೆ ಎಂದು ಹೇಳುವಾಗ ಅವರನ್ನು ಪ್ರಶ್ನಿಸಬಾರದು. ರಾಜೀನಾಮೆ ಹಾಗೂ ಅನರ್ಹತೆ ಇವೆರಡಲ್ಲೂ ಯಾವುದು ಮೊದಲು ನೀಡಿದ್ದಾರೆ ಎಂದು ಪರಶೀಲನೆ ಮಾಡಬೇಕು. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಬಳಿ ಹೋಗಲು ನಿರ್ಧರಿಸಿದ್ದಾರೆ. ಮೈತ್ರಿ ಸರ್ಕಾರದಿಂದ ಸ್ಪೀಕರ್ ಮೇಲೂ ಒತ್ತಡ ಹೇರಲಾಗುತ್ತಿದೆ.
ಶಾಸಕರು ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ನ್ಯಾಯಾಲಯದ ಮುಂದೆ ಮಾಧ್ಯಮದವರ ಬಳಿ ಸ್ಪಷ್ಟಪಡಿಸಿದ್ದಾರೆ. ಪಕ್ಷಾಂತರ ಮಾಡುವುದು ನಮ್ಮ ಉದ್ದೇಶವಲ್ಲ. ಸರ್ಕಾರದಿಂದ ಹೊರಬರುವುದೇ ನಮ್ಮ ಮೂಲ ಉದ್ದೇಶ ಎಂದು ಅತೃಪ್ತ ಶಾಸಕರು ತಿಳಿಸಿದ್ದರು. ರಾಜೀನಾಮೆ ಹಾಗೂ ಅನರ್ಹತೆಯನ್ನು ಮಿಶ್ರಣ ಮಾಡುವುದು ಸರಿಯಲ್ಲ. ಶಾಸಕರಿಗೆ ಸದನದಲ್ಲಿ ಭಾಗವಹಿಸಲು ಇಷ್ಟವಿಲ್ಲದಿದ್ದಾಗ ಬಲವಂತ ಯಾಕೆ ಮಾಡುತ್ತಾರೆ? ಅತೃಪ್ತ ಶಾಸಕರು ವಿಪ್ ಜಾರಿಗೂ ಮುನ್ನವೇ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ ಕಳೆದರೆ ಸರ್ಕಾರ ಪತನವಾದಂತೆ. ಶಾಸಕರ ಹಕ್ಕನ್ನು ಸ್ಪೀಕರ್ ಅವರು ಹರಣ ಮಾಡುತ್ತಿದ್ದಾರೆ. ನನಗೆ ಏನೂ ಮಾಡಬೇಕು ಅನಿಸುತ್ತದೋ ಅದನ್ನು ಮಾಡುವ ಹಕ್ಕು ನನಗಿದೆ. ಗುರುವಾರ ವಿಶ್ವಾಸಮತಯಾಚನೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಹೊಸ ವಿಪ್ ನೀಡುವ ಆಟವನ್ನು ಆಡುತ್ತಿದ್ದಾರೆ. ಸುಪ್ರೀಂಕೋರ್ಟ್‍ನ ಆದೇಶ ಈ ಮೊದಲಿನ ವಿಪ್‍ಗೆ ಮಾತ್ರ ಅನ್ವಯವಾಗುತ್ತದೆ. ಕರ್ನಾಟಕ ಸರ್ಕಾರಕ್ಕೆ ಬಹುಮತ ಇಲ್ಲ.
ಕಲಂ 191/2ರ ಪ್ರಕಾರ ರಾಜೀನಾಮೆ ನೀಡುವ ಶಾಸಕರ ಹಕ್ಕನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ವಿಧಾನ ಸಭೆಯ ನಿಯಮಗಳು ನೇರವಾಗಿದೆ. ಹೀಗಾಗಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲೇಬೇಕು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಅನರ್ಹತೆ ಮಾಡಲು ಏನು ಕಾರಣವಿದೆ? ಎಂದು ಪ್ರಶ್ನಿಸಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿದ ಮುಕುಲ್ ರೋಹ್ಟಗಿ ಅವರು ಅನರ್ಹತೆಗೊಳಿಸಲು ಯಾವುದೇ ಸ್ಪಷ್ಟ ಕಾರಣಗಳು ಇಲ್ಲ. ನಮ್ಮ ಕಕ್ಷಿದಾರರ ಮೇಲೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಸದನದ ಹೊರಗಿನ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ವಿಧಾನಸಭಾ ಅಧಿವೇಶನಕ್ಕೆ ಹಾಜರಾಗುವಂತೆ ಒತ್ತಡ ಹೇರುವುದು ಸರಿಯೇ? ಎಂದು ಉತ್ತರಿಸಿದ್ದಾರೆ. ಜುಲೈ 10 ರಂದು 2ನೇ ಅನರ್ಹತೆ ಅರ್ಜಿ ಹಾಕಿದ್ದಾರೆ. ನಾನು ವಾದ ಮಂಡಿಸುತ್ತಿರುವುದು ರಾಜೀನಾಮೆ ಬಗ್ಗೆ ಅನರ್ಹತೆ ಬಗ್ಗೆ ಅಲ್ಲ. ವಿಶ್ವಾಸ ಮತಯಾಚನೆ ವೇಳೆ ಸರ್ಕಾರದ ಪರ ಮತ ಚಲಾಯಿಸುವಂತೆ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರ ರಾಜೀನಾಮೆಯನ್ನು ಬಾಕಿ ಇಟ್ಟು ಅನರ್ಹತೆ ಪ್ರಕರಣ ವಿಚಾರಣೆಗೆ ಮುಂದಾಗಿದ್ದಾರೆ. ಈ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಅತೃಪ್ತ ಶಾಸಕರು ಬಿಜೆಪಿ ಜೊತೆ ಸೇರಿ ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅನರ್ಹತೆಯ ಅಸ್ತ್ರ ಹೂಡಿ ಸರ್ಕಾರವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಸ್ಪೀಕರ್ ಅವರು ಹೇಳುವಂತೆ ವಿಚಾರಣೆ ಅಗತ್ಯವಿಲ್ಲ. ಸ್ಪೀಕರ್ ಅವರು ರಾಜೀನಾಮೆ ಹಾಗೂ ಅನರ್ಹತೆ ಬಗ್ಗೆ ಏಕಕಾಲದಲ್ಲಿ ತೀರ್ಮಾನಿಸಿದ್ದಾರೆ. ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಮಧ್ಯೆ ಪ್ರವೇಶಿಸಿ ನೀವು ರಾಜೀನಾಮೆ ನೀಡಿದರೆ ಏನಾಗುತ್ತೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲರು ನಾನು ಬೇರೆ ಪಕ್ಷ ಸೇರಿ ಸಚಿವನಾಗುತ್ತೇನೆ ಎಂದು ಉತ್ತರಿಸಿದರು. ಶಾಸಕರನ್ನು ಅನರ್ಹತೆ ಮಾಡಿದರೂ ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದು. ಬಳಿಕ ಸಚಿವರಾಗಬಹುದು. ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಬಳಿ ಯಾವುದೇ ಸಾಕ್ಷಿಗಳಿಲ್ಲ. ಒಂದು ವೇಳೆ ಅನರ್ಹ ಮಾಡಿದರೆ 3 ತಿಂಗಳ ನಂತರ ಸಚಿವರಾಗಬಹುದು. ಸಚಿವರಾಗಲು ಬೇರೆ ಪಕ್ಷವನ್ನು ಸೇರಬೇಕೆಂದೇನೂ ಇಲ್ಲ.
ಆರ್ಟಿಕಲ್ 190ರ ಪ್ರಕಾರ ಶಾಸಕರು ಕೈ ಬರಹದ ಮೂಲಕ ರಾಜೀನಾಮೆಯನ್ನು ನೀಡಿದ್ದಾರೆ. ಹೀಗಾಗಿ ಶೀಘ್ರವೇ ರಾಜೀನಾಮೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಶಾಸಕರು ಕೋರ್ಟ್ ಮುಂದೆಯೇ ರಾಜೀನಾಮೆ ನೀಡಿದ್ದೇವೆ ಎಂದು ಮಾಧ್ಯಮದವರ ಮುಂದೆ ಗೋಗರೆದಿದ್ದಾರೆ. ರಾಜೀನಾಮೆಗೂ ಮುನ್ನ ಅನರ್ಹತೆ ಮಾಡುವ ಭಾದ್ಯತೆ ಏನಾದ್ರೂ ಇದ್ಯಾ? ಶಾಸಕರು ರಾಜೀನಾಮೆ ನೀಡಲು ಬೇರೆ ಬೇರೆ ಕಾರಣ ಇರಬಹುದು. ರಾಜೀನಾಮೆಗೆ ಕಾರಣ ನೀಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಕಾರಣ ನೀಡಿದರೂ ಸ್ಪೀಕರ್‍ಗೆ ಅದನ್ನು ತೆಗೆದು ಹಾಕುವುದಕ್ಕೆ ಅವಕಾಶ ಇದೆ. ರಾಜೀನಾಮೆ ಹಾಗೂ ಅನರ್ಹತೆ ಬಗ್ಗೆ ಸ್ಪೀಕರ್ ಮೇಲೆ ನಿರ್ಬಂಧ ಹೇರಲು ಆಗುವುದಿಲ್ಲ. ಕೇರಳ ಶಾಸಕರ ಪ್ರಕರಣದಲ್ಲಿ ಅನರ್ಹತೆ ಬಾಕಿ ಇದ್ದರೂ ರಾಜೀನಾಮೆ ಅಂಗೀಕಾರವಾಗಿತ್ತು. ಈ ವೇಳೆ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಸ್ಪೀಕರ್ ಹೇಗೆ ತೀರ್ಮಾನ ಕೈಗೊಳ್ಳಬೇಕು ಎಂದು ನಾವೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ವರ್ಷ ಮೇ 18ರಂದು 24 ಗಂಟೆಯೊಳಗೆ ವಿಶ್ವಾಸ ಮತಯಾಚನೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಬೇರೆ ಬೇರೆ ರಾಜ್ಯಗಳ ಪ್ರಕರಣಗಳಲ್ಲಿ ಸುಪ್ರೀಂ ನಿರ್ದೇಶನ ನೀಡಿದೆ. ಕೋರ್ಟ್‍ಗೆ ನಿರ್ದೇಶನ ನೀಡುವ ಅಧಿಕಾರ ಇದೆ. ನಾಳೆ ಅಥವಾ ವಿಶ್ವಾಸ ಮತಯಾಚನೆಗೂ ಮುನ್ನ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ದೇಶನ ಕೊಡಿ ಎಂದು ಹೇಳಿ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು










