ನವದೆಹಲಿ : ದೆಹಲಿಯ ಶಾಹೀನ್ ಭಾಗ್ ನಲ್ಲಿ ಜೆಸಿಬಿ ಇಂದು ಮತ್ತೆ ಸದ್ದು ಮಾಡಿದ್ದು, ಜೆಸಿಬಿಗಳು ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ದೊಡ್ಡ ಪ್ರತಿಭಟನೆಯೇ ನಡೆಯಿತು. ಹೀಗಾಗಿ ಸದ್ಯ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ, ದೆಹಲಿಯ ಶಾಹೀನ್ ಬಾಗ್ ನಲ್ಲಿ ಅಕ್ರಮ ತೆರವು ಕಾರ್ಯಾಚರಣೆ ವಿರುದ್ಧ ಸಿಪಿಐ(ಎಂ) ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ತೆರವು ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರ ಪೀಠ, ಅರ್ಜಿ ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ಸಿಪಿಐ(ಎಂ)ಏಕೆ ಅರ್ಜಿ ಸಲ್ಲಿಸುತ್ತಿದೆ? ಉಲ್ಲಂಘನೆಯಾಗುತ್ತಿರುವ ಮೂಲಭೂತ ಹಕ್ಕು ಯಾವುದು? ರಾಜಕೀಯ ಪಕ್ಷಗಳ ಇಚ್ಛೆಯ ಮೇರೆಗೆ ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ನಿಮ್ಮ ವೇದಿಕೆಯಲ್ಲ. ನೀವು ಹೈಕೋರ್ಟ್‌ಗೆ ಹೋಗಿ ಎಂದು ಪೀಠ ಹೇಳಿದೆ.
ಒಂದು ವೇಳೆ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡುತ್ತಿದ್ದರೆ ಅವರನ್ನು ತೆರವುಗೊಳಿಸಲಾಗುವುದು ಮತ್ತು ಅಧಿಕಾರಿಗಳು ಕಾನೂನು ಉಲ್ಲಂಘಿಸಿದರೆ ಅರ್ಜಿದಾರರು ಹೈಕೋರ್ಟ್‌ಗೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.










