ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ : ಎಲ್.ಜಿ.ಪರಮೇಶ್ವರಪ್ಪ

76
firstsuddi

ಚಿಕ್ಕಮಗಳೂರು: ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ನೌಕರರ ಡಾ.ರಾಧಾಕೃಷ್ಣನ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಲ್.ಜಿ. ಪರಮೇಶ್ವರಪ್ಪ ಹೇಳಿದರು.

ನಗರದ ಬಸವನಹಳ್ಳಿ ಸರ್ಕಾರಿ ಮಾದರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ. ವಿದ್ಯಾವಂತರಾಗುವುದರಿಂದ ಸಮಾಜದಲ್ಲಿ ಸೂಕ್ತ ಸ್ಥಾನಮಾನ, ಗೌರವ ಲಬಿಸುತ್ತದೆ ಎಂದರು.

ಜಿಲ್ಲಾ ಶಿಕ್ಷಣ ಇಲಾಖೆಯ ನೌಕರರ ಡಾ.ರಾಧಾಕೃಷ್ಣನ್ ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1,01,158ರೂ.ನಿವ್ವಳ ಲಾಭ ಗಳಿಸಿದ್ದು ಲಾಭಾಂಶದಲ್ಲಿ ಸದಸ್ಯರಿಗೆ ಶೇ.5ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷೆ ಸಿ.ಕೆ.ವಿಜಯಲಕ್ಷ್ಮಿ ಮಾತನಾಡಿ, ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವಂತೆ ಶಿಕ್ಷಕರಿಗೆ ಮನವಿ ಮಾಡಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರನೀಡಲಾಯಿತು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ತಳಿಹಳ್ಳ ಶಾಲೆಯ ಶಿಕ್ಷಕ ಪುಟ್ಟಸ್ವಾಮಿ ಮತ್ತು ಮಣೇನಹಳ್ಳಿ ಶಾಲೆಯ ಶಿಕ್ಷಕಿ ಶೀಲಾ ಅವರನ್ನು ಸನ್ಮಾನಿಸಲಾಯಿತು.

ಸಂಘದ ಕಾರ್ಯದರ್ಶಿಆರ್.ಬಸವಕುಮಾರ್, ನಿರ್ದೇಶಕರಾದ ಅಬ್ದುಲ್ ಮಜೀದ್, ಎಲ್.ಟಿ.ಅಜ್ಜಯ್ಯ, ಬಸವರಾಜು, ಎಸ್.ಕೆ.ಕೃಷ್ಣಪ್ಪ ಆರ್.ಲೀಲಾವತಿ, ಕೆ.ಲೋಕೇಶ್, ಮಹಮ್ಮದ್ ಇಸ್ಮಾಯಿಲ್, ಆರ್.ರವಿ, ಹೆಚ್.ಓ.ಶಶಿಧರ, ಸ್ವಾಮಿ ಉಪಸ್ಥಿತರಿದ್ದರು.