ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ…

111
firstsuddi

ಮಂಗಳೂರು : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೊ) ಎಫ್ಟಿಎಸ್‌ಸಿ-1 ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ನಿವಾಸಿ ಪದ್ಮನಾಭ ಶಿಕ್ಷೆಗೊಳಗಾದವ. ಶಾಲೆಯಿಂದ ಬಾಲಕಿ ಮನೆಗೆ ತೆರಳುತ್ತಿರುವ ಸಮಯದಲ್ಲಿ ಈತ ಅಡ್ಡಗಟ್ಟಿ ಲೈಂಗಿಕ ಉದ್ದೇಶದಿಂದ ಆಕೆಯ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದಿದ್ದ. ಅಲ್ಲದೇ ಬಾಲಕಿಯ ತಂದೆಗೆ ಜೀವ ಬೆದರಿಕೆ ಹಾಕಿದ್ದನು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಉಪನಿರೀಕ್ಷರಾದ ಅವಿನಾಶ್ ಹೆಚ್ ಗೌಡ ಅವರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿ ಮೇಲಿನ ಅಪರಾಧ ಸಾಬೀತಾಗಿದೆ. ಹೀಗಾಗಿ ನ್ಯಾಯಾಲಯವು ಅಪರಾಧಿಗೆ 3 ವರ್ಷಗಳ ಸಾಧಾರಣ ಕಾರಾಗೃಹ ಹಾಗೂ 500 ರೂ ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿಯಾದ ಸಹನಾದೇವಿ ಅವರು ಸರ್ಕಾರದ ಪರ ವಾದ ಮಂಡಿಸಿದರು.