ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ; ರುಪ್ಸಾ ಆರೋಪಕ್ಕೆ ಸ್ಪಷ್ಟೀಕರಣ ಕೊಡುವ ಅಗತ್ಯವಿಲ್ಲ ಎಂದ ಬೊಮ್ಮಾಯಿ.

58
firstsuddi

ರಾಯಚೂರು : ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತ ರುಪ್ಸಾ ಆರೋಪ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರು ಆರೋಪದಲ್ಲಿ ಯಾವುದೇ ಹುರುಳಿಲ್ಲ ಅಂತ ಹೇಳಿದ್ದಾರೆ. ನಾನು ಮತ್ತೆ ಅದಕ್ಕೆ ಸ್ಪಷ್ಟೀಕರಣ ಕೊಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ರಾಯಚೂರು ಕೃಷಿ ವಿವಿಯಲ್ಲಿ ಆಯೋಜಿಸಿರುವ ಸಿರಿಧಾನ್ಯ ಮೇಳಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯಚೂರು ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಕೆಕೆಆರ್​ಡಿಬಿಗೂ ಸಾಕಷ್ಟು ಅನುದಾನ ನೀಡುತ್ತಿದ್ದೇವೆ. ಪ್ರತ್ಯೇಕವಾದ ರಚನೆಯಾದ ನಂತರವೂ ತೆಲಂಗಾಣ ಇನ್ನೂ ಹಿಂದುಳಿದ ಪ್ರದೇಶವಾಗಿದೆ. ತೆಲಂಗಾಣದ ಸಮಸ್ಯೆಗಳ ಬಗೆಗಿನ ಗಮನ ಬೇರೆಡೆ ಸೆಳೆಯಲು ಕೆ ಚಂದ್ರಶೇಖರ್ ರಾವ್ ರಾಯಚೂರು ಸೇರ್ಪಡೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯು ಹಾಸ್ಯಾಸ್ಪದ ಮತ್ತು ಇದೊಂದು ರಾಜಕೀಯ ಪ್ರೇರಿತ ಹೇಳಿಕೆವಾಗಿದೆ. ನಮ್ಮ ಒಂದಿಂಚು ಜಾಗವನ್ನು ನಾವು ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.

ಮುಂದಿನ ತಿಂಗಳು ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ. ಇದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಚಾಲನೆಯನ್ನು ಕೊಡಲಾಗುತ್ತದೆ. ಸಿರಿಧಾನ್ಯ ಬೆಳೆಯಲು ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡಲಿದೆ. ಆರ್ಥಿಕ ಸಹಾಯ ನೀಡುವುದು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಬಗ್ಗೆ ಸದ್ಯ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆ ನಡೆಯುತ್ತಿದೆ. ನಾನು ಬೆಂಗಳೂರಿಗೆ ಹೋದ ಮೇಲೆ ಮುಂದಿನದನ್ನು ಹೇಳುತ್ತೇನೆ ಎಂದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಕಳೆದ ಬಾರಿ ದೆಹಲಿಗೆ ಹೋದಾಗ ಕೇಂದ್ರ ಆರೋಗ್ಯ ಸಚಿವರೊಂದಿಗೆ ಏಮ್ಸ್ ಸ್ಥಾಪನೆ ಬಗ್ಗೆ ಮಾತನಾಡಿದ್ದೇನೆ. 371 (ಜೆ) ಜಾರಿ ಇರುವ ಭಾಗ, ಕೇಂದ್ರದ ಮಹತ್ವಾಕಾಂಕ್ಷೆ ಜಿಲ್ಲೆ ಹಾಗೂ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಯಾಗಿದ್ದು, ಉತ್ತಮ ಆರೋಗ್ಯ ಸಂಸ್ಥೆ ಬೇಕೆಂದು ಕೇಳಿದ್ದೇನೆ. ಅತೀ ಶೀಘ್ರದಲ್ಲಿ ಒಂದು ನಿರ್ಣಯ ಮಾಡುತ್ತೇವೆ ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಬದ್ಧವಾಗಿದೆ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಯೋಜನೆ ಜಾರಿಗೆ ಅಗತ್ಯವಿರುವ ಬಾಧಿತವಾಗುವ ಗ್ರಾಮಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.