ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪೌರಕಾರ್ಮಿರ ದಿನಾಚರಣೆಯ ಪ್ರಯುಕ್ತ ರೇಸ್ ಕೋರ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ 500ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆ ಏರ್ಪಡಿಸಿದ್ದರು. ಬೆಳಿಗ್ಗೆ ಸಿಎಂ ಸಹ ಪೌರ ಕಾರ್ಮಿಕರೊಂದಿಗೆ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್ ಉಪಹಾರ ಸವಿದಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಮಾಜದ ಜನರ ಸೇವೆ ಮಾಡುವ ಪೌರ ಕಾರ್ಮಿಕರಿಗೆ ಅವರ ಸೇವೆಯಲ್ಲಿ ಭದ್ರತೆಯಿರಲಿಲ್ಲ. ಅನುಕೂಲವಿರಲಿಲ್ಲ. ಇದಕ್ಕಾಗಿ ನಮ್ಮ ಸರ್ಕಾರ ಸಮಿತಿ ರಚಿಸಿ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ಸಭೆ ನಡೆಸಿದ್ದೇವೆ. ರಾಜ್ಯದಲ್ಲಿ ಹಂತಹಂತವಾಗಿ 43 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು,ಅದರಲ್ಲಿ ಮೊದಲನೆ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂಗೊಳಿಸಲಾಗುವುದು. ನಾನು ಸಿಎಂ ಆಗಿ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಿಳಿಸಿದರು.
ಪೌರಕಾರ್ಮಿಕರು ಯಾವ ರೀತಿ ಕೆಲಸ ಮಾಡ್ತಾರೆ ಅಂತಾ ನೋಡಿದ್ರೆ ಕಣ್ಣೀರು ಬರುತ್ತೆ, ಯಾರಾದ್ರು ಸೇವೆ ಮಾಡಬೇಕು ಅಂದ್ರೆ ಮೊದಲು ನಿಮ್ಮ ಸೇವೆ ಮಾಡಬೇಕು. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ಸೇವಾ ಭದ್ರತೆ ಕೊಟ್ಟೆ ಕೊಡ್ತೀವಿ. ಹಿಂದಿನ ಸರ್ಕಾರಗಳು ಮಾಡದೇ ಇರೋದನ್ನ ನಮ್ಮ ಸರ್ಕಾರ ಮಾಡಿದೆ. ಇತರೆ ಸೌಲಭ್ಯ ಏನೇ ಇದ್ರು ನಮ್ಮ ಗಮನಕ್ಕೆ ತನ್ನಿ, ಅದನ್ನೂ ಮಾಡುವ ಕೆಲಸ ಮಾಡ್ತೀನಿ ಎಂಬ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಸಿಸಿ ಪಾಟೀಲ್ ಪರಿಷತ್ ಸದಸ್ಯರಾದ ಚಲವಾದಿ ನಾರಾಯಣ ಸ್ವಾಮಿ, ಶಾಸಕ ಎನ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.










