ಬೆಂಗಳೂರು : ಸಂಜಯನಗರ ಬಸ್ ಸ್ಟಾಪ್ ಬಳಿ ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದಾಶಿವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಆರ್ಮಿ ಸ್ಕೂಲ್ ನ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಸಾವನ್ನಪ್ಪಿದ್ದ ಪಿಯುಸಿ ವಿದ್ಯಾರ್ಥಿ. ಬೆಳಗಿನಜಾವ 5:45ರ ಸುಮಾರಿಗೆ ಘಟನೆ ನಡೆದಿದೆ. ತಲೆಯ ಎಡಭಾಗಕ್ಕೆ ಗುಂಡು ಬಿದ್ದಿದ್ದು, ಬುಲೆಟ್ ಕೂಡ ಮೃತ ವ್ಯಕ್ತಿಯ 6 ಅಡಿ ಅಂತರದಲ್ಲಿ ಬಿದ್ದಿದೆ. ತಂದೆಯ ಪರವಾನಗಿ ಇರುವ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಯುವಕನೇ ಶೂಟ್ ಮಾಡಿಕೊಂಡಿದ್ದಾನಾ? ಅಥವಾ ಬೇರೆ ಯಾರಾದರೂ ಶೂಟ್ ಮಾಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ ರಾಹುಲ್ ನಾಲ್ಕು ಗಂಟೆಗೆ ಮನೆಯಿಂದ ಎದ್ದು ಹೊರಬಂದಿದ್ದಾನೆ. ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಬರುತ್ತಿದ್ದ. ಅದೇ ರೀತಿ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ.
ವಿದ್ಯಾರ್ಥಿ ರಾಹುಲ್ ಭಗತ್ ಸಿಂಗ್ ಹಾಗೂ ಬಾಬ್ನಾ ದಂಪತಿಯ ಪುತ್ರನಾಗಿದ್ದು, ಭಗತ್ ಸಿಂಗ್ ಅವರು ಸೇನೆಯ ನಿವೃತ್ತ ಹವಾಲ್ದಾರ್ ಆಗಿದ್ದಾರೆ. ಉತ್ತರಾಖಂಡ್ ಮೂಲದವರಾದ ಭಗತ್ ಸಿಂಗ್, ಕಳೆದ 20 ವರ್ಷಗಳಿಂದ ಬೆಂಗಳೂರಿನ ಆರ್.ಟಿ.ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ. 10 ನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದಿದ್ದ. ಮನೆಯಲ್ಲಿಯೂ ಓದಬೇಕು ಎನ್ನುವ ಒತ್ತಡ ಇರಲಿಲ್ಲ. ಆದರೂ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.
ಮುಂಜಾನೆ 5 ಗಂಟೆ ಸುಮಾರಿಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತಪಟ್ಟ ಬಳಿಕವೂ ಪೋಷಕರಿಂದ ನಿರಂತರವಾಗಿ ಕರೆ ಬರುತ್ತಿತ್ತು. ಬಳಿಕ ಕರೆ ಸ್ವೀಕರಿಸಿ, ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿ, ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಳಿಕ ಮೃತ ಯುವಕನ ತಾಯಿ ಪ್ರತಿಕ್ರಿಯಿಸಿದ್ದು, ಪ್ರತಿ ದಿನ ರಾತ್ರಿ ಮತ್ತು ಮುಂಜಾನೆ ಹೊತ್ತಿನಲ್ಲಿ ಓದುತ್ತಿದ್ದ. ಮಾನಸಿಕ ಒತ್ತಡ ಜಾಸ್ತಿಯಾದಾಗ ಹೊರಗಡೆ ವಾಕಿಂಗ್ ಮಾಡುತ್ತಿದ್ದ. ಇಂದು ಕೂಡ 4 ಗಂಟೆ ಸುಮಾರಿಗೆ ಹೊರಗಡೆ ಬಂದಿದ್ದ. ಬೆಳ್ಳಗೆ 5 ಗಂಟೆಯಿಂದ ಸತತವಾಗಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿರಲಿಲ್ಲ ಎಂದಿದ್ದಾರೆ.










