ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ : ಸಚಿವ ಸುಧಾಕರ್.

100
firstsuddi

ಕಲಬುರುಗಿ : ಲಾಕ್ ಡೌನ್ ಜಾರಿಗೆ ಬಂದು ಕೇವಲ ನಾಲ್ಕು ದಿನಗಳಾಗಿದ್ದು, ಇದರ ಪರಿಣಾಮ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಲಾಕ್ ಡೌನ್ ಇದ್ದರೂ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಜನರು ಕೂಡಾ ಜವಾಬ್ದಾರಿಯನ್ನು ತೆಗೆದುಕೊಂಡರೆ ಬೇಗನೆ ಕೊರೊನಾ ನಿರ್ಮೂಲನೆ ಮಾಡಬಹದು. ಮಹಾರಾಷ್ಟ್ರದಲ್ಲಿ 44 ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಈಗಷ್ಟೇ ಮುಂಬೈನಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ, ಅಂತಹ ಜಿಲ್ಲೆಗಳಿಗೆ ಪಕ್ಕದ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದ ಜನರಿಗೆ ಶೇ 15ರಷ್ಟು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ನಿಗದಿಪಡಿಸಿದ್ದು ಅನಿವಾರ್ಯ. ಈ ಸಂದರ್ಭದಲ್ಲಿ ಜನರ ಜೀವ ಉಳಿಸುವುದು ಅಗತ್ಯ. ಈ ಆದೇಶಕ್ಕೆ ಯಾವ ಸಚಿವರ ಬೇಸರ ಸಹ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಸಿಎಂ ಯಡಿಯೂರಪ್ಪನವರು ಸಾಂಕೇತಿಕವಾಗಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಎರಡು ಕೋಟಿ ಲಸಿಕೆಗೆ ಈಗಾಗಲೇ ಆರ್ಡರ್ ಮಾಡಿದ್ದೇವೆ. ಕಂಪನಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಲಸಿಕೆ ಯಾವಾಗ ಬರುತ್ತವೆ ಎನ್ನುವುದರ ನಿರ್ದಿಷ್ಟ ಮಾಹಿತಿ ಇಲ್ಲ. ಡೋಸ್ ಬಂದ ನಂತರ ದೊಡ್ಡ ಪ್ರಮಾಣದಲ್ಲಿ ಲಸಿಕಾ ಅಭಿಯಾನ ಶುರುವಾಗಲಿದೆ. ಪ್ರಸ್ತುತ ಆರು ಸಾವಿರ ಲಸಿಕಾ ಕೇಂದ್ರಗಳಿದ್ದು, ಅವುಗಳಿಗೆ 3 ಲಕ್ಷ ಲಸಿಕೆ ಅಗತ್ಯವಿದೆ. ಆದರೆ, ಸಾರ್ವತ್ರಿಕ ಲಸಿಕೆ ಆರಂಭವಾದಾಗ ನಿತ್ಯ ಆರು ಲಕ್ಷ ಲಸಿಕೆಯಾದರೂ ಬೇಕಾಗುತ್ತದೆ ಎಂದರು.

ಎಲ್ಲ ಕೋವಿಡ್ ರೋಗಿಗಳಿಗೂ ರೆಮ್ ಡಿಸಿವಿರ್ ಇಂಜೆಕ್ಷನ್ ಅಗತ್ಯವಿಲ್ಲ. ಸ್ವಯಂ ನಿರ್ಧಾರ ಮಾಡಿ ಯಾರೂ ತೆಗೆದುಕೊಳ್ಳಬಾರದು. ಯಾವ ರೋಗಿಗಳಿಗೆ ನೀಡಬೇಕು ಎಂಬ ಬಗ್ಗೆ ವೈದ್ಯರಿಗೆ ತಾಂತ್ರಿಕ ಸಮಿತಿ ಸಲಹೆ ನೀಡಲಿದೆ ಎಂದು ಸುಧಾಕರ್ ಅವರು ತಿಳಿಸಿದರು.