ಕೋವಿಡ್ ಮೂರನೇ ಅಲೆ ಹಾಗೂ ಓಮಿಕ್ರಾನ್ ಸಂಬಂಧಿತ ಚಿಕಿತ್ಸೆ ಸಿದ್ಧತೆ ಕುರಿತು ಚರ್ಚೆ : ಡಾ.ಕೆ.ಸುಧಾಕರ್.

82
firstsuddi

ಬೆಂಗಳೂರು : ಕೋವಿಡ್ ಮೂರನೇ ಅಲೆ ಹಾಗೂ ಹೊಸ ಓಮಿಕ್ರಾನ್ ವೈರಾಣು ಸಂಬಂಧಿತ ಚಿಕಿತ್ಸೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಆರೋಗ್ಯ ಸೌಧದಲ್ಲಿಂದು ಸಚಿವ ಸುಧಾಕರ್ ನೇತೃತ್ವದಲ್ಲಿ ಓಮಿಕ್ರಾನ್ ನಿಯಂತ್ರಣ ಕುರಿತು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮೆಡಿಕಲ್ ಕಾಲೇಜುಗಳ ನಿರ್ದೇಶಕರ ಜತೆಗೆ ಸಭೆ ನಡೆಸಲಾಯ್ತು. ಚರ್ಚೆ ಬಳಿಕ ಮಾತಾನಾಡಿದ ಸಚಿವ ಸುಧಾಕರ್, ಮೂರನೇ ಅಲೆಗೆ ಅಥವಾ ಒಮಿಕ್ರಾನ್ ವೈರಸ್ಗೆ ಮುಂಬರುವ ದಿನಗಳಲ್ಲಿ ಸಿದ್ದತೆ ಮಾಡಿಕೊಳ್ಳಬೇಕಿದೆ. ಮೆಡಿಕಲ್ ಕಾಲೇಜು ಮುಖ್ಯವಾಗಿದೆ. ಹೀಗಾಗಿ, ಒಂದು ಸಭೆ ಮಾಡಲಾಗಿದೆ. ಹೆಚ್ಒಡಿ, ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಕಡ್ಡಾಯವಾಗಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಒಂದನೇ ಮತ್ತು ಎರಡನೇ ಅಲೆಯಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನರ್ಸಿಂಗ್, ಪ್ಯಾರಾ ಮೆಡಿಕಲ್ ನಲ್ಲಿ ಸುಮಾರು 18 ಸಾವಿರ ಮಂದಿ ಇದ್ದಾರೆ. ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ ಓಮಿಕ್ರಾನ್ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಿಡಬೇಕಾದ ಹಾಸಿಗೆ ಹಾಗೂ ಐಸಿಯು ಬಗ್ಗೆ ನಿರ್ಧರಿಸಲಾಗುವುದು ಎಂದರು

ಸಚಿವ ಸಂಪುಟ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಗೃಹ ವೈದ್ಯರ ಕೋವಿಡ್ ರಿಸ್ಕ್ ಭತ್ಯೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರೂ. ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ಹೆಚ್ಆರ್ಎಂಎಸ್ ತೊಂದರೆ ಇತ್ತು. ಹೀಗಾಗಿ, ಅವ್ರಿಗೆ ವೇತನ ಪಾವತಿ ತಡವಾಗುತ್ತಿತ್ತು. ಅದಕ್ಕೆ ಇನ್ನೊಂದು ವಾರದೊಳಗೆ ಎಲ್ಲಾ ಸಿದ್ದತೆಗಳು ಆಗಲಿವೆ ಎಂದರು.