ನವದೆಹಲಿ : ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 3 ಕೃಷಿ ಕಾನೂನನ್ನು ವಿರೋಧಿಸಿ ದೇಶಾದ್ಯಂತ ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 3 ಕೃಷಿ ಕಾನೂನನ್ನು ರದ್ದುಗೊಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯಾಗ್ರಹದಿಂದಾಗಿ ಅಹಂಕಾರ ತಲೆ ತಗ್ಗಿಸುವಂತಾಗಿದೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.
ಇನ್ನೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು, ಇಷ್ಟು ದಿನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿಜಯವಾಗಿದೆ. 700ಕ್ಕೂ ಹೆಚ್ಚು ಜನರು ಸತ್ತರು. ಕೇಂದ್ರವೇ ತಪ್ಪಿತಸ್ಥರೆಂದು ತೋರುತ್ತದೆ. ಆದರೆ ರೈತರು ಅನುಭವಿಸಿದ ಸಂಕಷ್ಟಗಳಿಗೆ ಯಾರು ಹೊಣೆ ಹೊರುತ್ತಾರೆ? ಈ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ ಎಂದಿದ್ದಾರೆ.










