ಬೆಂಗಳೂರು : ಇಂದಿನಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಸದನದಲ್ಲಿ ಹೈಡ್ರಾಮಾ ನಡೆದಿದೆ. ಸದನದ ಬಾವಿಗಿಳಿದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಅಂಗಿ ಬಿಚ್ಚಿ ಅಶಿಸ್ತು ತೋರಿದ್ದಾರೆ. ಇದನ್ನು ಖಂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಂದು ವಾರಗಳ ಕಾಲ ಸದನಕ್ಕೆ ಭಾಗವಹಿಸದಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ವಿಧಾನಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತಾಗಿ ಚರ್ಚೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಅವರು ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇವರ ನಡೆಗೆ ಅಸಮಾಧಾನಗೊಂಡ ಸ್ಪೀಕರ್ ಏನ್ರೀ ಸಿದ್ದರಾಮಯ್ಯನವರೇ? ಇವರು ವಿಧಾನಸಭಾ ಸದಸ್ಯರೇನ್ರೀ? ಏನ್ರೀ ಇವರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಸಂಗಮೇಶ್ ಅವರೇ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ. ಶರ್ಟ್ ಬಿಚ್ಚಿಕೊಂಡು ಗಲಾಟೆ ಮಾಡಿದ ನೀವು ಅಶಿಸ್ತಿನಿಂದ ನಡೆದುಕೊಂಡು ಭದ್ರಾವತಿ ಜನತೆಗೆ ಅವಮಾನ ಮಾಡುತ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ ಎಂದು ಗರಂ ಆದ ಸ್ಪೀಕರ್ ಸದನದಲ್ಲಿ ಅಶಿಸ್ತು, ಅಗೌರವ ಹಾಗೂ ಬೇಜವಾಬ್ದಾರಿ ವರ್ತನೆಗೆ ಮಾ.12ರ ವರೆಗೆ ನಿಯಮ 348ರ ಅಡಿ ಸಂಗಮೇಶ್ ಅವರನ್ನು ಒಂದು ವಾರಗಳ ಕಾಲ ಸದನದಿಂದ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಆದೇಶಿಸಿದ್ದಾರೆ.










