ಸರ್ಕಾರದ ವಿರುದ್ಧ ಆರೋಪಗಳ ಪಟ್ಟಿ ಬಿಡುಗಡೆಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ…

188
firstsuddi

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‍ಗೆ ಸಂಬಂಧಿಸಿದ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ನಡೆದ ಫೇಸ್‍ಬುಕ್ ಲೈವ್ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಸಲಹೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಆರೋಪಗಳ ಸರಮಾಲೆಯ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಸಿದ್ಧಪಡಿಸಿರುವ ಆರೋಪ ಪಟ್ಟಿ ಈ ಕೆಳಕಂಡಂತಿದೆ.
1. ರಾಜ್ಯಕ್ಕೆ ಕೇಂದ್ರ ಸರ್ಕಾರ 1,600 ವೆಂಟಿಲೇಟರ್‍ಗಳನ್ನು ನೀಡಿದೆ. ಆದರೆ ರಾಜ್ಯ ಸರ್ಕಾರ ಈ ನಡುವೆ ಎಷ್ಟು ವೆಂಟಿಲೇಟರ್‍ಗಳನ್ನು ಖರೀದಿಸಿದೆ? ಅದರ ದರ ಹಾಗೂ ವ್ಯತ್ಯಾಸದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು.
2. ತಮಿಳುನಾಡು ಸರ್ಕಾರ ಒಂದು ವೆಂಟಿಲೇಟರ್‍ಗೆ 4 ಲಕ್ಷ ರೂ ನೀಡಿ ಖರೀದಿ ಮಾಡಿದೆ. ಆದರೆ ನಮ್ಮ ಸರ್ಕಾರ ಒಂದು ವೆಂಟಿಲೇಟರ್‍ಗೆ ಅದರ ನಾಲ್ಕು ಪಟ್ಟು ದರ ಸಂದಾಯ ಮಾಡಿರುವುದು ಏಕೆ?
3. ಕೇಂದ್ರ ಸರ್ಕಾರ 4 ಲಕ್ಷ ರೂಪಾಯಿಗೆ ಒಂದು ವೆಂಟಿಲೇಟರ್ ಖರೀದಿಸಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಒಂದು ವೆಂಟಿಲೇಟರ್‍ಗೆ 18 ಲಕ್ಷ ರೂ ನೀಡಿದ್ದೇಕೆ?
4. ಬಿಐಇಚ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸುಮಾರು 9,000 ರೂ ಮೌಲ್ಯದ ಹಾಸಿಗೆ ಸೆಟ್‍ಗಳನ್ನು ದಿನಕ್ಕೆ 800 ರೂ.ರಂತೆ 3 ತಿಂಗಳಿಗೆ ಬಾಡಿಗೆ ಪಡೆದಿರುವುದೇಕೆ?
5. ಈಗ ಬಾಡಿಗೆ ನೀಡದವರಿಂದಲೇ ಸರ್ಕಾರ ಅರ್ಧ ದರಕ್ಕೆ ಹಾಸಿಗೆ ಸೆಟ್ ಮಾರಾಟ ಮಾಡುವಂತೆ ಅಧಿಕಾರಿಗಳಿಂದ ತೀವ್ರ ಒತ್ತಡ ಹಾಕಿಸುತ್ತಿರುವುದೇಕೆ?
6. ಸರ್ಕಾರದ ಬೇರೆ ಬೇರೆ ಇಲಾಖೆಗಳು 4 ಸಾವಿರ ಕೋಟಿ ರೂಪಾಯಿ ವಿವಿಧ ಕಾರ್ಯಗಳಿಗೆ ಖರ್ಚು ಮಾಡಿದೆ. ಆದರೆ ಯಾವುದೇ ಟೆಂಡರ್ ಕರೆಯದೆ ಇಷ್ಟು ದೊಡ್ಡ ಮೊತ್ತ ಹೇಗೆ ಖರ್ಚಾಯಿತು?
7. ಆಹಾರ ಕಿಟ್ ವಿತರಣೆಯಲ್ಲೂ ಇದೇ ರೀತಿ ಬಿಲ್ ಮಾಡಲಾಗಿದೆ.
8. ಹೆಲ್ತ್ ಕಿಟ್ ವಿತರಣೆಯಲ್ಲೂ ಭಾರಿ ಗೋಲ್‍ಮಾಲ್ ಮಾಡಲಾಗಿದ್ದು, ಸಂಘ ಸಂಸ್ಥೆಗಳು ನೀಡಿದ್ದ ಲೆಕ್ಕವನ್ನು ಸರ್ಕಾರದ ಲೆಕ್ಕದಲ್ಲಿ ತೋರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.