ಮಂಡ್ಯ : ಕಾನೂನು ಪಾಲಿಸುವವರಿಂದಲೇ ಕಾನೂನು ಉಲ್ಲಂಘನೆಯಾಗಿರುವ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ಅನುಮತಿ ಪಡೆಯದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಸುಭಾಷ್ ನಗರದಲ್ಲಿರುವ ಸರ್ಕಾರಿ ನಿವಾಸದ ಆವರಣದಲ್ಲಿದ್ದ ಮರಗಳನ್ನು ಕತ್ತರಿಸಿದ್ದಾರೆ ಎನ್ನಲಾಗಿದೆ.
ಡಾ.ಎಂ.ಅಶ್ವಿನಿ ಅವರು ನಿನ್ನೆ ಸಂಜೆ ನಿವಾಸದ ಒಳ ಆವರಣದಲ್ಲಿದ್ದ 10 ಕ್ಕೂ ಹೆಚ್ಚು ಮರಗಳನ್ನು ಯಂತ್ರದ ಮೂಲಕ ಕತ್ತರಿಸಿದ್ದಾರೆ. ಅಲ್ಲದೇ ಎಸ್ ಪಿ ರಕ್ಷಣೆಗೆಂದು ನೇಮಿಸಿದ್ದ ತರಬೇತಿ ನಿರತ ಕಾನ್ ಸ್ಟೇಬಲ್ ಗಳನ್ನೂ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಮರ ಕಡಿದು ಸಾಗಿಸಲು ಪೊಲೀಸ್ ವಾಹನ, ತರಬೇತಿ ನಿರತ ಪೊಲೀಸರನ್ನು ಬಳಸಿಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿದೆ. ತಿಂಗಳ ಹಿಂದೆಯೂ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ್ದಾರಂತೆ. ವಾಸ್ತು ನೆಪದಲ್ಲಿ ತಾವಿದ್ದ ಸರ್ಕಾರಿ ನಿವಾಸವನ್ನ ಎಸ್ ಪಿ ಬದಲಾಯಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಎಸ್ ಪಿಗೊಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ಉಂಟಾ? ಎಂದು ಪ್ರಶ್ನಿಸಿದ ಸಾರ್ವಜನಿಕರು, ಕಾನೂನು ಉಲ್ಲಂಘಿಸಿದ ಎಸ್ ಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.










