ಸರ್ಕಾರಿ ನೌಕರರ ವೇತನ ಪರಿಷ್ಕರಿಸಲು ಆಯೋಗ ರಚಿಸುವುದಾಗಿ ಬೊಮ್ಮಾಯಿ ಘೋಷಣೆ…

84
firstsuddi

ಬೆಂಗಳೂರು : ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ ರಚಿಸುವುದಾಗಿ ಘೋಷಣೆ ಮಾಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ನೀಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ವರದಿ ಸಲ್ಲಿಸಲು ಆದಷ್ಟು ಬೇಗ ಆಯೋಗ ರಚನೆ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ಬಜೆಟ್ ಮುನ್ನ ಸಿಎಂಗೆ ಪತ್ರ ಬರೆದು ಏಳನೇ ವೇತನ ಆಯೋಗ ಶಿಫಾರಸು ಅನುಷ್ಠಾನ ಸಂಬಂಧ ಸಮಿತಿ ರಚಿಸುವಂತೆ ಮನವಿ ಮಾಡಿದ್ದರು. ಆದರೆ, ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಘೋಷಣೆ ಮಾಡಿರಲಿಲ್ಲ. ಇದೀಗ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಏಳನೇ ವೇತನ ಆಯೋಗ ರಚಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.