ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಗೆ ದಕ್ಷಿಣ ಕನ್ನಡ ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
2020ರ ಜನವರಿ 20ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಬಾಂಬ್ ಇರಿಸಿದ್ದ. ಪತ್ತೆಯಾಗಿದ್ದ ಬಾಂಬ್ ಅನ್ನು ಅಂದೇ ವಿಮಾನ ನಿಲ್ದಾಣ ಸಮೀಪದ ಕೆಂಜಾರು ಎಂಬಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಆದರೆ, ಅಪರಾಧಿ ಆದಿತ್ಯ ರಾವ್ 2020ರ ಜ.22ರಂದು ತಾನೇ ಬಾಂಬ್ ಇರಿಸಿರುವುದಾಗಿ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಂದೆ ಶರಣಾಗಿದ್ದ. ಆತನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ನಂತರ ಮಂಗಳೂರು ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ ಆತನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿತ್ತು.
ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗಿನಲ್ಲಿ ಕಂಡು ಬಂದ ಶಂಕಾಸ್ಪದ ವಸ್ತುಗಳು ಸ್ಪೋಟಕಗಳಾಗಿತ್ತು ಎಂಬುದು ಎಫ್ ಎಸ್‌ಎಲ್ ಪರೀಕ್ಷೆಯಿಂದ ಸಾಬೀತಾಗಿತ್ತು. ಆದಿತ್ಯ ರಾವ್ ವಿರುದ್ಧ 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿಕಾರಿಗಳು ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದಿತ್ಯ ರಾವ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ 20 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.










