ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಸರ್ಕಾರಿ ಭೂಮಿಯನ್ನು ಜಮೀನು ಇಲ್ಲದ ಬಡ ರೈತರಿಗೆ ವಿತರಣೆ ಮಾಡುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ಅವರನ್ನು ಇಂದು ಭೇಟಿ ಮಾಡಿದ ಸಂಘಟನೆಯ ಮುಖಂಡರು ಈ ಸಂಬಂಧ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ 4,530 ಎಕರೆಯಷ್ಟು ಸರ್ಕಾರಿ ಭೂಮಿ ಇದೆ. ಅದು ಕೆಲವೆಡೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದ್ದರೆ, ಉಳಿದ ಭೂಮಿ ಅರಣ್ಯ ಇಲಾಖೆ ಮತ್ತು ಬಲಾಢ್ಯರ ಅಧೀನದಲ್ಲಿದೆ ಎಂದರು.
ಜಿಲ್ಲೆಯಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆಯಲು ಭೂಮಿ ಇಲ್ಲದೆ ಬಹಳಷ್ಟು ರೈತ ಕುಟುಂಬಗಳು ಕೂಲಿ, ನಾಲಿ ಮಾಡಿ ಬದುಕುತ್ತಿವೆ. ಒಂದು ಹೊತ್ತಿನ ತುತ್ತಿಗೂ ಆ ಸಂಸಾರಗಳು ಪರದಾಡುತ್ತಿವೆ ಎಂದು ಹೇಳಿದರು.
ಜಿಲ್ಲಾಡಳಿತ ಅರಣ್ಯ ಇಲಾಖೆ ಮತ್ತು ಬಲಾಢ್ಯರ ವಶದಲ್ಲಿರುವ ಸರ್ಕಾರಿ ಭೂಮಿಯನ್ನು ಬಿಡಿಸಿಕೊಂಡು ಅದನ್ನು ಭೂಹೀನ ಬಡ ರೈತ ಕುಟುಂಬಗಳಿಗೆ ನೀಡಿದರೆ ಅವರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಕಾರ್ಯ ಪ್ರವೃತ್ತವಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮಾ ನಾಯಕ್, ತಾಲೂಕು ಅಧ್ಯಕ್ಷ ಗಿರೀಶ್ ಜಂಟಿ, ಕಾರ್ಯದರ್ಶಿ ನಂದನ್, ಸಂಘಟನಾ ಕಾರ್ಯದರ್ಶಿ ಯುಸೂಫ್, ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.










