ಸಾಮಾಜಿಕ ಕಾರ್ಯಕರ್ತನ ಮೇಲೆ ಕಬ್ಬಿಣದ ರಾಡ್​ನಿಂದ ಮಾರಣಾಂತಿಕ ಹಲ್ಲೆ!

78
firstsuddi

ಬೆಳಗಾವಿ : ಖಾನಾಪುರದ ಸಾಮಾಜಿಕ ಕಾರ್ಯಕರ್ತ ಜಯಂತ್ ಮುಕುಂದ್ ತಿನೇಕರ್ ಎಂಬುವರ ಮೇಲೆ ಏಳೆಂಟು ಜನರ ಗುಂಪೊಂದು ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಆಗಿದೆ.

ಬೆಳಗಾವಿ ತಾಲೂಕಿನ ಖಾನಾಪುರ – ಬೆಳಗಾವಿ ಹೆದ್ದಾರಿಯ ಝಾಡ್ ಶಹಾಪುರ ಬಳಿ ಹಿಂಬಾಲಿಸಿಕೊಂಡು ಬಂದ ಮುಸುಕುದಾರಿಗಳು ಕಾರು ತಡೆದು ಕಬ್ಬಿಣದ ರಾಡ್ ಗಳಿಂದ ಥಳಿಸಿದ್ದಾರೆ. ಈ ವೇಳೆ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಕೆಲ ಲಾರಿ ಚಾಲಕರು ಸಹಾಯಕ್ಕೆ ಧಾವಿಸಿದ್ದರಿಂದ ಹೆಚ್ಚಿನ ಅಪಘಾತ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.

ಇತ್ತ ಹಲ್ಲೆ ವೇಳೆ ಜಯಂತ್ ಅವರ ಬಲಗಾಲು, ಮೊಣಕಾಲು, ಭುಜ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಖಾನಾಪುರದ ನಿವಾಸಿ ಜಯಂತ ಮುಕುಂದ ತಿನೇಕರ್ ಅವರು, ನಕಲಿ ಛಾಪಾ ಕಾಗದ ಹಗರಣದ ಕುರಿತು ಆಗಿನ ಡಿಜಿಪಿ ಸಾಂಗ್ಲಿಯಾನ ಅವರನ್ನು ಭೇಟಿಯಾಗಿ ಕರೀಂ ಲಾಲ ತೆಲಗಿ ನಡೆಸುತ್ತಿದ್ದ ನಕಲಿ ಛಾಪಾ ದಂಧೆಯ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ.