ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಜುಲೈ 5ರ ಬಳಿಕ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಸಿದ್ಧರಾಗುತ್ತಿರುವ ಸುಳಿವು ಸಿಗುತ್ತಿದ್ದಂತೆ, ಸರ್ಕಾರ ಮುಷ್ಕರ ಮಾಡದಂತೆ ಆದೇಶ ಹೊರಡಿಸಿದ್ದು, ಅಗತ್ಯ ಸೇವೆಗಳ ಮುಷ್ಕರವನ್ನ ನಿಷೇಧಿಸಿದೆ. ಜುಲೈ 1ರಿಂದ ಡಿಸೆಂಬರ್ ಅಂತ್ಯದವರೆಗೆ ಯಾವುದೇ ನೌಕರರು ಮುಷ್ಕರವನ್ನು ನಡೆಸುವಂತಿಲ್ಲ ಎಂದು ಸೂಚಿಸಿದೆ.
ಅಲ್ಲದೇ ಕೋವಿಡ್ ನಿಂದಾಗಿ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹಾಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯ 3ರ ಉಪವಿಭಾಗ 1ರ ಅನ್ವಯ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶವನ್ನು ಹೊರಡಿಸಿದೆ. ಇದರಿಂದ ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಇದೀಗ ಸರ್ಕಾರವೇ ಬಿಗ್ ಶಾಕ್ ನೀಡಿದೆ.










