ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಠಿಯಿಂದ ಸ್ವಚ್ಚತೆಗೆ ಆದ್ಯತೆ ನೀಡಿ : ಪ್ರಕಾಶ್ ಸಲಹೆ…

90
firstsuddi

ಚಿಕ್ಕಮಗಳೂರು : ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಠಿಯಿಂದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಮೂಡಿಗೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಸಲಹೆ ಮಾಡಿದರು.

ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿ.ಪಂ. ಮಹಾತ್ಮಾ ಗಾಂಧೀ ಗ್ರಾಮೀಣ ಮತ್ತು ಇಂಧನ ಅಭಿವೃದ್ದಿ ಸಂಸ್ಥೆ ಹಾಗೂ ಇಂಟಿಗ್ರೇಟೆಡ್ ಕಮ್ಯೂನಿಟಿ ಡೆವೆಲಪ್‍ಮೆಂಟ್ ಸೊಸೈಟಿಯಿಂದ ನಿನ್ನೆ ನಡೆದ ಘನ ತ್ಯಾಜ್ಯ ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಚ ಮತ್ತು ಸುಂದರವಾಗಿದ್ದರೆ ಅನೇಕ ಸಾಂಕ್ರಾಮಿಕ ರೋಗಗಳಿಂದ ನಾವು ಮುಕ್ತರಾಗಿ, ಆರೋಗ್ಯವಂತರಾಗಿ ಬದುಕಬಹುದು. ಪರಿಸರ ಸ್ವಚ್ಚವಾಗಿದ್ದರೆ ವಾಯುಮಾಲಿನ್ಯ, ಜಲಮಾಲಿನ್ಯ ಇಲ್ಲದಂತಾಗುತ್ತದೆ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಐಸಿಡಿಎಸ್ ಸಂಸ್ಥೆಯ ಅಧ್ಯಕ್ಷ ಜೆ.ವಿನಾಯಕ ತರಬೇತಿ ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಐದು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು, ಸಾವಯವ ಮತ್ತು ಎರೆಹುಳು ಗೊಬ್ಬರ ತಯಾರಿಕೆ, ಜೈವಿಕ ಇಂಧನ ತಯಾರಿಸುವ ಕುರಿತು ತರಬೇತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಪಾಲ್ಗೊಂಡ ಸಂಜೀವಿನಿ ಸ್ವಸಹಾಯ ಸಂಘ ಒಕ್ಕೂಟದ ಸದಸ್ಯರಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಕೃಷ್ಣಮೂರ್ತಿ, ಎಂ.ಜಿ.ಐ.ಆರ್.ಇ.ಡಿ ಸಂಸ್ಥೆಯ ಭೋದಕ ರವಿಕುಮಾರ್, ಎನ್.ಆರ್.ಎಲ್.ಎಂ. ಸಂಸ್ಥೆಯ ತಾಲ್ಲೂಕು ಸಂಯೋಜಕಿ ಶಾಲಿನಿ ಉಪಸ್ಥಿತರಿದ್ದರು.