ಚಿಕ್ಕಮಗಳೂರು : ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ ರಾಜ್ಯ ಸರ್ಕಾರ ಎಂಟು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಯುವತಿ ರಕ್ಷಿತಾ ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಐದು ದಿನಗಳ ಹಿಂದೆ ಸರ್ಕಾರಿ ಬಸ್ ನಿಂದ ಇಳಿಯುವಾಗ ಆಯಾ ತಪ್ಪಿ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ, ರಕ್ಷಿತಾ ಪೋಷಕರು ಆಕೆಯ 9 ಅಂಗಾಂಗಳನ್ನ ದಾನ ಮಾಡಿದ್ದರು.
ಆಕೆಯ ಅಂಗಾಂಗಳಿಂದ 9 ಜನರ ಜೀವ ಉಳಿದಿದೆ. ಹಾಗಾಗಿ, ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರ ಎನ್ನುವುದಕ್ಕಿಂತ ಗೌರವಯುತವಾಗಿ ಎಂಟು ಲಕ್ಷ ರೂ. ಹಣವನ್ನು ನೀಡಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂ, ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂ ಹಣವನ್ನು ಸರ್ಕಾರ ಮಂಜೂರು ಮಾಡಿದೆ.










