ಶಾಲಾ ಬ್ಯಾಗ್ ತೂಕ ಇಳಿಕೆ ವಿಚಾರ – ಸರ್ಕಾರಕ್ಕೆ ಹೈಕೋರ್ಟ್‍ನಿಂದ ನೋಟಿಸ್ ಜಾರಿ…

73
firstsuddi

ಬೆಂಗಳೂರು : ಶಾಲಾ ಮಕ್ಕಳ ಬ್ಯಾಗ್ ಗಳ ತೂಕ ಇಳಿಕೆಗೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ವಕೀಲರಾದ ರಮೇಶ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇಂದಿನ ಶಾಲೆಯ ಚಿತ್ರಣವನ್ನು ಕಲ್ಪಿಸಿಕೊಂಡರೆ ಭಾರವಾದ ಬ್ಯಾಗ್ ಅನ್ನು ಬೆನ್ನ ಮೇಲೆ ಹೊತ್ತು ಶಾಲೆಗೆ ತೆರಳುವ ಮಕ್ಕಳ ಚಿತ್ರಣ ಲಭ್ಯವಾಗುತ್ತೆ. ಮಕ್ಕಳು ನಡೆಯುವ ಭಂಗಿ ಹಾಗೂ ಅವರ ಮುಖಭಾವ ಗಮನಿಸಿದರೆ ಬೆನ್ನಿನ ಮೇಲೆ ಅತಿ ಭಾರ ಹೊತ್ತಿರೋದು ಗಮನಕ್ಕೆ ಬರುತ್ತೆ, ಮಕ್ಕಳ ಸಾಮರ್ಥ್ಯಕ್ಕಿಂತಾ ಅತಿ ಹೆಚ್ಚಿನ ತೂಕದ ಬ್ಯಾಗ್ ಹೊರಿಸಲಾಗುತ್ತಿದೆ ಎಂದು ವಿವರಿಸಿದರು.

ಮಕ್ಕಳ ಬ್ಯಾಗ್ ನ ತೂಕ ಕಡಿಮೆ ಮಾಡುವ ಸಂಬಂಧ ಹಲವು ಕಾನೂನು, ನಿಯಮಗಳನ್ನು ಜಾರಿಗೊಳಿಸಲಾಗಿದೆಯಾದರೂ, ಶಾಲಾ ಆಡಳಿತ ಮಂಡಳಿಗಳು ಇವನ್ನು ಪಾಲನೆ ಮಾಡುತ್ತಿಲ್ಲ, ಮಕ್ಕಳ ಬ್ಯಾಗ್ಗಳ ಹೊರೆ ಕಡಿಮೆ ಆಗಿಲ್ಲ ಎಂದು ವಿವರಿಸಿರುವ ರಮೇಶ್ ನಾಯಕ್, ಈ ಸಂಬಂಧ 2006ರಲ್ಲಿ ರಾಜ್ಯಸಭೆಯಲ್ಲಿ ವಿಧೇಯಕವನ್ನೂ ಪ್ರಸ್ತಾಪಿಸಲಾಯ್ತು. ನಂತರ ಅದು ಮೂಲೆಗುಂಪಾಯ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದಲ್ಲದೆ ಅತಿ ಭಾರದ ಶಾಲಾ ಬ್ಯಾಗ್ ಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ. ಹೀಗಾಗಿ, ಈ ಕುರಿತು ಸಂವಿಧಾನದ ಕಲಂ 21ರಡಿ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.