ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೆ ಹಲವು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ಫೈಟ್ ಮಾಸ್ಟರ್ ರವಿ ವರ್ಮಾ ವಿರುದ್ಧ ಜನಪ್ರಿಯ ಹಾಗೂ ಹಿರಿಯ ಫೈಟ್ ಮಾಸ್ಟರ್ ಆಗಿರುವ ಡ್ಯಾನಿ ಮಾಸ್ಟರ್ ಅಲಿಯಾಸ್ ಢಿಫರೆಂಟ್ ಡ್ಯಾನಿ, ಜೀವ ಬೆದರಿಕೆ ಹಾಕಿರುವ ಆರೋಪ ಮಾಡಿದ್ದಾರೆ. ಈಗಾಗಲೇ ಫಿಲಂ ಛೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿರುವ ಡ್ಯಾನಿ ಮಾಸ್ಟರ್, ಇಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.
ಡ್ಯಾನಿ ಮಾಸ್ಟರ್ ಮತ್ತು ರವಿ ವರ್ಮಾ ಮಾಸ್ಟರ್ ಜಗಳ ನಿನ್ನೆ ಮೊನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಮುಸುಕಿನ ಗುದ್ದಾಟ ಇದ್ದೇ ಇದೆ. ಅದು ಈಗ ಪೊಲೀಸ್ ಠಾಣೆ ಮೆಟ್ಟಿಲು ಏರುವ ಹಂತಕ್ಕೆ ತಲುಪಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಡ್ಯಾನಿ ಮಾಸ್ಟರ್, ತಮ್ಮ ಹೆಸರು ಹೇಳಿಕೊಂಡು ಪರಭಾಷಾ ಸಿನಿಮಾ ರಂಗದಲ್ಲಿ ರವಿ ವರ್ಮಾ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ರವಿ ವರ್ಮಾರನ್ನು ಕೆರಳಿಸಿತ್ತು.
‘ಜಾಕಿ’ ಸಿನಿಮಾದಲ್ಲಿ ಬೆಂಕಿ ಫೈಟ್ ಒಂದಿದೆ. ಡ್ಯಾನಿ ಮಾಸ್ಟರ್ ಹೇಳಿರುವಂತೆ ಆ ಫೈಟ್ ಅನ್ನು ಕಂಪೋಸ್ ಮಾಡಿರುವುದು ಡ್ಯಾನಿ ಮಾಸ್ಟರ್. ಆದರೆ ನಟ ಪ್ರಭುದೇವ ಅವರು ಒಮ್ಮೆ ಪುನೀತ್ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಆ ಫೈಟ್ ದೃಶ್ಯಗಳನ್ನು ನೋಡಿ ರವಿವರ್ಮಾ ಅವರನ್ನು ಕರೆಸಿಕೊಂಡು ಅವರಿಗೆ ಅವಕಾಶ ಕೊಟ್ಟರಂತೆ. ಅದಾದ ಬಳಿಕ ರವಿವರ್ಮಾ, ಟಾಲಿವುಡ್, ಕಾಲಿವುಡ್, ಬಾಲಿವುಡ್ಗಳಲ್ಲಿಯೂ ಫೈಟ್ ನಿರ್ದೇಶಕರಾಗಿ ಖ್ಯಾತರಾದರು. ಆದರೆ ಡ್ಯಾನಿ ಹೇಳಿರುವಂತೆ ಆ ಅವಕಾಶ ಬರಬೇಕಾಗಿದ್ದಿದ್ದು ಅವರಿಗೆ, ಏಕೆಂದರೆ ಪ್ರಭುದೇವ ನೋಡಿ ಮೆಚ್ಚಿಕೊಂಡ ಫೈರ್ ಫೈಟ್ ಅನ್ನು ಕಂಪೋಸ್ ಮಾಡಿದ್ದು ಡ್ಯಾನಿ ಮಾಸ್ಟರ್. ಈ ಕಾರಣಕ್ಕಾಗಿ ರವಿ ವರ್ಮಾ ಅವರು ಜೀವ ಬೆದರಿಕೆ ಹಾಕಿದ್ದಾರೆ ಎನ್ನುವುದು ಡ್ಯಾನಿ ಆರೋಪ.
ಈ ಕುರಿತಾಗಿ ಮಾತನಾಡಲು ಡ್ಯಾನಿ ಅವರಿಗೆ ರವಿ ವರ್ಮಾ ಕರೆ ಮಾಡಿದ್ದರಂತೆ. ಅನಾರೋಗ್ಯದ ಕಾರಣದಿಂದಾಗಿ ಮಾತನಾಡಲು ಆಗಿರಲಿಲ್ಲ. ಅಷ್ಟರಲ್ಲಿ ಕೆರಳಿದ್ದ ರವಿ ವರ್ಮಾ ತಮಗೆ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಡ್ಯಾನಿ ಆರೋಪ ಮಾಡಿದ್ದಾರೆ.










