ನವದೆಹಲಿ : ಸುಪ್ರೀಂ ಕೋರ್ಟ್ ನೋಟು ಬ್ಯಾನ್ ನಿರ್ಧಾರವನ್ನು ಎತ್ತಿ ಹಿಡಿದಿಲ್ಲ, ನೋಟು ಅಮಾನ್ಯೀಕರಣಗೊಳಿಸಿದ್ದು ದೇಶದ ಆರ್ಥಿಕತೆಗೆ ವಿನಾಶಕಾರಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
500, 1000 ಮುಖಬೆಲೆ ನೋಟುಗಳನ್ನು 2016ರಲ್ಲಿ ಅಮಾನ್ಯೀಕರಣ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ನ್ಯಾಯ ಸಮ್ಮತವಾಗಿದೆ ಎಂದು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಇಂದು ತೀರ್ಪು ಪ್ರಕಟಿಸಿತು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್, ನೋಟು ಅಮಾನ್ಯೀಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳುವುದು ಸಂಪೂರ್ಣ ತಪ್ಪು. 2016ರ ನವೆಂಬರ್ 8 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸುವ ಮೊದಲು RBI ಕಾಯಿದೆ, 1934 ರ ಸೆಕ್ಷನ್ 26(2) ಅನ್ನು ಸರಿಯಾಗಿ ಅನ್ವಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಅಷ್ಟೆ ಎಂದರು.
ತೀರ್ಪಿನಲ್ಲಿ ನೋಟು ರದ್ದತಿಯ ಪರಿಣಾಮದ ಬಗ್ಗೆ ಏನನ್ನೂ ಹೇಳಿಲ್ಲ, ಇದು ತುಂಬಾ ಆಘಾತಕಾರಿ ನಿರ್ಧಾರ. ಇದು ಬೆಳವಣಿಗೆಯ ಆವೇಗವನ್ನು ಹಾನಿಗೊಳಿಸಿತು, MSMEಗಳನ್ನು ದುರ್ಬಲಗೊಳಿಸಿದೆ, ಅನೌಪಚಾರಿಕ ವಲಯವನ್ನು ಕೊನೆಗೊಳಿಸಿದೆ ಮತ್ತು ಲಕ್ಷಗಟ್ಟಲೆ ಜೀವನೋಪಾಯವನ್ನು ನಾಶಪಡಿಸಿದೆ ಎಂದಿದ್ದಾರೆ.










