ಗುಜರಾತ್: ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಸಮವಸ್ತ್ರ ಧರಿಸಿ ಗುಜರಾತ್ ನ ಕಚ್ ಪ್ರಾಂತ್ಯದಲ್ಲಿ ಇರುವ ಭದ್ರತಾ ಸಿಬ್ಬಂದಿಯನ್ನು ಭೇಟಿ ಮಾಡಿ, ಅವರಿಗೆ ಹಬ್ಬದ ಶುಭಾಶಯಗಳನ್ನು ಹೇಳುವ ಮೂಲಕ ಇಂದು ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.
2014 ರಲ್ಲಿ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು ಪ್ರತಿವರ್ಷ ವಿವಿಧ ಸ್ಥಳಗಳಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಾರೆ. 2014ರಲ್ಲಿ ಸಿಯಾಚಿನ್‍ನಿಂದ ಪ್ರಾರಂಭಿಸಿ, ನಂತರ ಪಂಜಾಬ್‍ನ ಗಡಿ, ಹಿಮಾಚಲ ಪ್ರದೇಶದ ಸುಮ್ಡೋ, ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್, ಉತ್ತರಾಖಂಡದ ಹರ್ಸಿಲ್, ಜಮ್ಮು ಮತ್ತು ಕಾಶ್ಮೀರದ ರಾಜೌರಿ, ರಾಜಸ್ಥಾನಗಳಲ್ಲಿ ಆಚರಿಸಿಕೊಂಡಿದ್ದರು. ಲೋಂಗೆವಾಲಾ, ಕಾಶ್ಮೀರದ ನೌಶೇರಾ, ಕಾರ್ಗಿಲ್ ಮತ್ತು ಕಳೆದ ವರ್ಷ ಹಿಮಾಚಲದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಸಮಯ ಕಳೆದಿದ್ದರು. ಇದೇ ಸಮಯದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ ನರೇಂದ್ರ ಮೋದಿ ಅವರು ಈ ದೈವಿಕ ಬೆಳಕಿನ ಹಬ್ಬದಲ್ಲಿ, ನಾನು ಎಲ್ಲರಿಗೂ ಆರೋಗ್ಯಕರ, ಸಂತೋಷ ಮತ್ತು ಸಮೃದ್ಧ ಜೀವನವನ್ನು ಬಯಸುತ್ತೇನೆ. ಎಂದು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.










