ಬೆಂಗಳೂರು : ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸರ್ಕಾರದ ಮಾರ್ಗಸೂಚಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ತಡೆಯುವ ಕುರಿತು ಸರ್ಕಾರ ಮ್ಯಾರಥಾನ್ ಸಭೆಗಳನ್ನು ಮಾಡಿದೆ, ಜನರನ್ನು ಸೋಂಕಿನಿಂದ ದೂರವಿಡಲು ಮಾರ್ಗಸೂಚಿಗಳನ್ನು ನಿನ್ನೆ ಪ್ರಕಟಿಸಿದೆ. ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆಯೇ ಹೊರತು ಈಗಾಗಲೇ ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು, ಅವರ ಜೀವ ಉಳಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರ್ಕಾರ ಮಾತಾಡಬೇಕಾಗಿದೆ ಎಂದಿದ್ದಾರೆ.
ನಿನ್ನೆ ಸಭೆಯ ನಂತರ ಜನರಿಗೆ ಕೇವಲ ಮಾರ್ಗಸೂಚಿಗಳನ್ನು ಮಾತ್ರ ಸೂಚಿಸಿದ್ದು, ಸೋಂಕಿನಿಂದ ದೂರ ಇರುವ ಸಲಹೆಯನ್ನು ನೀಡಲಾಯಿತು. ಆದರೆ, ಈಗಾಗಲೇ ಅಸ್ಪತ್ರೆಗಳಲ್ಲಿರುವವರ ರಕ್ಷಣೆಗಾಗಿ ಏನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಭೆಯ ನಂತರ ಸರ್ಕಾರ ಏಕೆ ಹೇಳಿಲ್ಲ? ಸರ್ಕಾರ ಸೋಂಕಿತರ ಪರಿಸ್ಥಿತಿಯನ್ನು ಅರಿತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಕೊರೊನಾ ಎರಡನೇ ಅಲೆ ಬರುವುದಾಗಿ ತಜ್ಞರು, ವಿಪಕ್ಷ ನಾಯಕರು ಹೇಳುತ್ತಲೇ ಬಂದಿದ್ದಾರೆ. ಕೋವಿಡ್ ಬಂದಿದ್ದು ಒಂದೂವರೆ ವರ್ಷಗಳ ಹಿಂದೆ. ವರದಿಗಳನ್ನು ಪಡೆದುಕೊಂಡ ಸರ್ಕಾರ ಈವರೆಗೆ ಏನು ಮಾಡಿತ್ತು? ಮುಂದೊಂದು ದಿನ ರಾಕ್ಷಸ ರೂಪಿಯಾಗಬಹುದಾದ ಈ ರೋಗದ ವಿರುದ್ಧ ಸರ್ಕಾರ ಈ ವರೆಗೆ ಮಾಡಿಕೊಂಡ ಸಿದ್ಧತೆಗಳು ಏನು? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಕೊರೊನಾ ಚಿಕಿತ್ಸೆಗೆ ಅಗತ್ಯವಿರುವ ಔಷಧ ಅಭಾವದ ಬಗ್ಗೆ ನಾನು ಈಗಾಗಲೇ ಮಾತಾಡಿದ್ದೇನೆ. ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ? ಚಿಕಿತ್ಸೆ ದುರ್ಬರವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ಹಂತದಲ್ಲಿ ಕುಗ್ಗಿ ಹೋಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಕ್ರಮ ಕೈಗೊಂಡಿದೆಯೇ? ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ರೆಮ್‌ಡಿಸಿವಿರ್ ಔಷಧವೂ ಸಿಗುತ್ತಿಲ್ಲ. ಚಿಂತಾಜನಕ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ಆಮ್ಲಜನಕ ಸಿಗುತ್ತಿಲ್ಲ. ಎಂಬುದರ ಬಗ್ಗೆ ಕೆಲವು ದಿನಗಳಿಂದ ಎಚ್ಚರಿಸುತ್ತಲೇ ಬಂದಿದ್ದೇನೆ. ಅತ್ಯಗತ್ಯವಾಗಿರುವ ಈ ಸವಲತ್ತುಗಳನ್ನು ಸರ್ಕಾರ ಹೊಂದಿಸುವ ಪ್ರಯತ್ನ ಮಾಡಿದೆಯೇ? ಇಲ್ಲವೋ ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಲ್ಲವೇ? ಜನರ ರಕ್ಷಣೆಗಾಗಿ ಮಾಡಿಕೊಂಡಿರುವ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರ್ಕಾರ ಹೇಳಬೇಕು ಎಂದಿದ್ದಾರೆ.










