ಸ್ವಿಮ್ಮಿಂಗ್ ಪೂಲ್ ಗಳಿಗೆ ಕುಡಿಯುವ ನೀರಿನ ಬಳಕೆಗೆ ನಿಷೇಧ…

49
firstsuddi

ಬೆಂಗಳೂರು: ನಗರದಲ್ಲಿ ಜಲಕ್ಷಾಮ ಹಿನ್ನಲೆ ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಿಮ್ಮಿಂಗ್ ಪೂಲ್ ಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿ ಜಲಮಂಡಳಿ ಆದೇಶಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ನಿಷೇಧಿಸಲಾಗಿದ್ದು, ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ 5000 ರೂ. ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ 5000 ರೂ. ಜತೆಗೆ ಹೆಚ್ಚುವರಿಯಾಗಿ ಪ್ರತಿ ದಿನ 500 ರೂ. ದಂಡ ವಿಧಿಸಲಾಗುವುದು. ಹಾಗೆಯೇ, ಈಜುಕೊಳದ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

ಸದ್ಯ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇರುವುದರಿಂದ ಈ ಸಂದರ್ಭದಲ್ಲಿ ನೀರು ಒದಗಿಸುವುದು ಜಲಮಂಡಳಿಗೆ ಸವಾಲಾಗಿ ಪರಿಣಮಿಸಿದೆ. ಅದಾಗ್ಯೂ, ನೀರು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ನೀರಿನ ಸಮಸ್ಯೆ ಹಿನ್ನಲೆ ಮಾರ್ಚ್ 15 ರಿಂದ ಹಂತಹಂತವಾಗಿ ಕಾವೇರಿ ನೀರನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಏಪ್ರಿಲ್ 1 ರಿಂದ ಶೇ.20 ರಷ್ಟು ಕಡಿತಗೊಳಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ 3 ಲಕ್ಷ ಜನರಿದ್ದಾರೆ. 1.40 ಕೋಟಿ ಜನರ ಹಿತದೃಷ್ಟಿಯಿಂದ ಮಂಡಳಿ ಕೈಗೊಂಡಿರುವ ಈ ನಿರ್ಧಾರಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ. ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರಿಗೆ ಮಂಡಳಿ ಇದುವರೆಗೆ ಶೇ.95 ರಿಂದ ಶೇ.100 ರಷ್ಟು ಪೂರೈಕೆ ಮಾಡುತ್ತಿತ್ತು. ಇನ್ನೂ ಮುಂದೆ ಶೇ.20 ರಷ್ಟು ನೀರು ಪೂರೈಕೆ ಕಡಿತಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈಲ್ವೆ, ಎಚ್ಎಎಲ್, ಏರ್ ಪೋರ್ಸ್, ಡಿಫೆನ್ಸ್, ಸಿ.ಆರ್.ಪಿ.ಎಫ್, ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಅನೇಕ ಸಂಸ್ಥೆಗಳು ತಮ್ಮ ಕ್ಯಾಂಪಸ್​ನಲ್ಲಿ ನೀರಿನ ಪ್ರಾಮುಖ್ಯತೆ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು ಎಂದು ಸೂಚನೆ ನೀಡಲಾಗಿದೆ.