ಬೆಳ್ತಂಗಡಿ(ದಕ್ಷಿಣ ಕನ್ನಡ): ಮದುವೆಯ ವೇಳೆ ಹಾರ ಬದಲಿಸುವಾಗ ವರನ ಕೈ ತಾಗಿತೆಂದು ಕೋಪಗೊಂಡ ವಧು ಹಾರವನ್ನು ಬಿಸಾಡಿ ಮದುವೆ ನಿರಾಕರಿಸಿದ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿಯ ಕಲ್ಯಾಣ ಮಂಟಪವೊಂದರಲ್ಲಿ ನಾರಾವಿಯ ವರನಿಗೆ ಮೂಡುಕೊಣಾಜೆಯ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಮದುವೆ ಶಾಸ್ತ್ರ ನಡೆಯುತ್ತಿದ್ದಂತೆ ಅರ್ಚಕರು ಹಾರ ಬದಲಿಸುವಂತೆ ಸೂಚಿಸಿದ್ದಾರೆ. ಅದರಂತೆ ವರ ಹಾರವನ್ನು ವಧುವಿನ ಕುತ್ತಿಗೆಗೆ ಹಾಕುತ್ತಿದ್ದಂತೆ ವಧು ರೊಚ್ಚಿಗೆದ್ದಿದ್ದಾಳೆ. ವರ ಹಾರ ಹಾಕುವಾಗ ವಧುವಿನ ಕೊರಳಿಗೆ ಕೈ ತಾಗಿದೆಯೆಂದು ಸಿಟ್ಟಿಗೆದ್ದ ವಧು ಮಂಟಪದಿಂದ ಹೊರನಡೆಯಲು ಮುಂದಾಗುತ್ತಿದ್ದಂತೆ ಸಂಬಂಧಿಕರು ಸಮಾಧಾನಪಡಿಸಿದ್ದಾರೆ. ಆದರೆ ಘಟನೆಯಿಂದ ಅವಮಾನಕ್ಕೊಳಗಾದ ವರನ ಕಡೆಯವರು ಮದುವೆಯನ್ನು ನಿರಾಕರಿಸಿದ್ದಾರೆ.
ಹೆಣ್ಣು, ಗಂಡಿನ ಕಡೆಯವರು ಮಾತಿಗೆ ಮಾತು ಬೆಳೆಸಿಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭ ಆದಾಗ ವೇಣೂರು ಪೊಲೀಸರು ಆಗಮಿಸಿದ್ದಾರೆ. ಎರಡೂ ಕಡೆಯವರಿಗೆ ಮಾತುಕತೆಗೆ ಪೊಲೀಸರು ಅವಕಾಶ ಮಾಡಿಕೊಟ್ಟರೂ ಸಂಬಂಧ ಬೆಸೆಯದೆ ಮದುವೆ ಮುರಿದುಬಿದ್ದಿದೆ ಎಂದು ತಿಳಿದು ಬಂದಿದೆ.










