ಯಾದಗಿರಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯಾದಗಿರಿಗೆ ಭೇಟಿ ನೀಡಿದ್ದು, ಕೊಡೆಕಲ್ ನಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ 2500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವಯಂಚಾಲಿತ ಸ್ಕಾಡಾ ಗೇಟ್ ಲೋಕಾರ್ಪಣೆ, ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ, ಸೂರತ್-ಚೆನ್ನೈ ಎಕ್ಸ್ ಪ್ರೆಸ್ ವೇಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಕರ್ನಾಟಕದಲ್ಲಿ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ ಅವರು, ನೆರೆದ ಸಾವಿರಾರು ಜನರು, ಅಭಿಮಾನಿಗಳು, ಕಾರ್ಯಕರ್ತರಿಗೆ ಕೈಮುಗಿದರು. ಈ ವೇಳೆ ಜನರು ‘ಮೋದಿ ಮೋದಿ’ ಎಂದು ಹರ್ಷೋದ್ಗಾರ ಮಾಡಿದರು.
ನನ್ನ ದೃಷ್ಟಿ ಎಷ್ಟು ದೂರ ಹೋಗಬಹುದೋ ಅಷ್ಟೂ ದೂರಕ್ಕೆ ಜನರೇ ಕಾಣಿಸುತ್ತಿದ್ದಾರೆ. ಹೆಲಿಪ್ಯಾಡ್ ನಲ್ಲಿಯೂ ಜನವೋ ಜನ. ಇಲ್ಲಿಯೂ ಅಷ್ಟೇ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ ಎಂದರು.
ಡಬಲ್ ಎಂಜಿನ್ ಸರ್ಕಾರ ಇದ್ದರೆ ಡಬಲ್ ಅಭಿವೃದ್ದಿ, ಎಲ್ಲರ ಕಲ್ಯಾಣವಾಗುತ್ತದೆ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಜಾರಿಗೆ ತಂದಿದೆ. ಈ ನಿಧಿಗೆ ರಾಜ್ಯ ಸರ್ಕಾರ 4 ಸಾವಿರ ರೂ. ನೀಡುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಯೋಜನೆಗಳಿಂದ ವಂಚಿತರಾದವರಿಗೆ ನಮ್ಮ ಸರ್ಕಾರ ಸಹಾಯ ಮಾಡುತ್ತದೆ ಎಂದರು.
3.5 ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಪ್ರಾರಂಭವಾದಾಗ, 18 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಂದು ದೇಶದ ಸುಮಾರು 11 ಕೋಟಿ ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ಹಿಂದಿನ ಸರ್ಕಾರಗಳಲ್ಲಿ ಯೋಜನೆಯ ಕಾಮಗಾರಿ ಆರಂಭಗೊಂಡು ದಶಕಗಳೇ ಕಳೆದರು ಅದು ಪೂರ್ಣಗೊಳ್ಳುತ್ತಿರಲಿಲ್ಲ. ಆದರೆ ನಮ್ಮ ಅವಧಿಯಲ್ಲಿ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳುತ್ತದೆ. ಹಿಂದೆ ಉಳಿದಿರುವ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವುದೇ ಡಬಲ್ ಎಂಜಿನ್ ಸರ್ಕಾರದ ಆಶಯ ಎಂದು ತಿಳಿಸಿದರು.










