ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ, ಪ್ಯಾರ್ ಕಾ ಗೋಲ್ ಗುಂಬಜ್, ಸ್ನೇಹಿತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸ್ಯಾಂಡಲ್ ವುಡ್ ಯುವ ನಟ ಧನುಷ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದಾಗ ಅಲ್ಲಿನ ವಾತಾವರಣದಿಂದ ನಟ ಧನುಷ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದ ಶ್ರೀಮುತ್ತುರಾಜ್, ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ಧನುಷ್ ಅವರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದ್ದು, ಇಂದು ಹುಟ್ಟೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನ ಅನೇಕ ನಟ-ನಟಿಯರು ಧನುಷ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.










