ಮೈಸೂರು ಮೂಲದ ಆದಿಲ್ ಖಾನ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ನಟಿ ಶೆರ್ಲಿನ್ ಚೋಪ್ರಾ ಅವರು ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್ ಅವರ ಬಂಧನ ಆಗಿದೆ ಎಂದು ವರದಿ ಆಗಿದೆ.
ಇಂದು ಮಧ್ಯಾಹ್ನ ರಾಖಿ ಸಾವಂತ್ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಖಿ ಸಾವಂತ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.
ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್ ಚೋಪ್ರಾ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗೆಯೇ ಅವರು ಈ ಹಿಂದೆ ನಿರ್ದೇಶಕ ಸಾಜಿದ್ ಖಾನ್ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಸಾಜಿದ್ ಖಾನ್ ಅವರನ್ನು ಸಲ್ಮಾನ್ ಖಾನ್ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್ ಅವರು ಶೆರ್ಲಿನ್ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನಾ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಆದಿಲ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ರಾಖಿ ಸಾವಂತ್ ಒಂದಲ್ಲೊಂದು ವಿಚಾರಕ್ಕೆ ಸದ್ದುಮಾಡುತ್ತಿದ್ದರು. ಆದಿಲ್ ಖಾನ್ ಜೊತೆಗಿನ ಮದುವೆ ಕುರಿತಂತೆ ಅವರು ಇತ್ತೀಚೆಗೆ ಕಣ್ಣೀರು ಹಾಕಿದ್ದರು. ಇನ್ನೇನು ಎಲ್ಲವೂ ಸರಿ ಆಯಿತು ಎನ್ನುವಾಗಲೇ ಅವರ ಬಂಧನವಾಗಿದೆ.










