ಉಡುಪಿ : ಹಿಜಬ್‍ಗಾಗಿ ಮುಸ್ಲಿಂ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾಳೆ.
ಹಿಜಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನಮಗೆ ನೀಡಲಾಗಿದೆ. ಆದರೆ ಹಿಜಬ್ ಧರಿಸಲು ಕಾಲೇಜು ಅನುಮತಿ ನೀಡುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರ್ಟ್ ಬಳಿ ಮನವಿ ಮಾಡಿ ವಿದ್ಯಾರ್ಥಿನಿ ರಿಟ್ ಅರ್ಜಿ ಸಲ್ಲಿಸಿದ್ದಾಳೆ.
ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಿನ್ನೆ ಕಾಲೇಜಿನಲ್ಲಿ ಸಭೆ ನಡೆಸಲಾಗಿತ್ತು. ಐವರು ಹಿಜಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ಹಿಜಬ್ ಗೆ ಅನುಮತಿ ಕೊಡಲು ಸಾಧ್ಯವಿಲ್ಲ. ಸರ್ಕಾರ, ಸಮಿತಿ ತೀರ್ಮಾನ ಮಾಡಿದಂತೆ ಸಮವಸ್ತ್ರದಲ್ಲಿ ಕಾಲೇಜಿಗೆ ಬರಬೇಕು ಎಂದು ಎಲ್ಲ ವಿಚಾರಗಳನ್ನು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ತರಗತಿಯಲ್ಲಿ ಹಿಜಬ್ ಧರಿಸಿ ಪಾಠ ಕೇಳುವ ಅವಕಾಶವಿಲ್ಲ. ಮನೆಯ ಪುರುಷರ ಜೊತೆ ಮಾತನಾಡಿ, ಇಂದು ತೀರ್ಮಾನ ತೆಗೆದುಕೊಳ್ಳುವುದಾಗಿ ಪೋಷಕರು ಹೇಳಿದ್ದಾರೆ.
ಹಿಜಬ್ ತೆಗೆದು ಕ್ಲಾಸಿಗೆ ಬರುವುದಾದರೆ ನಾಳೆಯಿಂದ ಬನ್ನಿ. ಮಾಧ್ಯಮ, ಸಂಘಸಂಸ್ಥೆ, ಸಂಘಟನೆಗೆ ಪ್ರವೇಶ ಇಲ್ಲ. ಎರಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಹೊರಗಿನಿಂದ ಯಾರೂ ಕಾಲೇಜ್ ಕ್ಯಾಂಪಸ್ ಗೆ ಬರುವಂತಿಲ್ಲ. ಶಿಸ್ತು ಪಾಲಿಸುವವರು ಕಾಲೇಜಿಗೆ ಬರಬಹುದು. ಇನ್ನು ಮುಂದೆ ಗೊಂದಲಕ್ಕೆ ಅವಕಾಶವಿಲ್ಲ ಎಂದು ಶಾಸಕ ರಘುಪತಿ ಭಟ್ ಖಡಕ್ ಆಗಿ ಹೇಳಿದ್ದರು. ಆದರೆ ಹಿಜಬ್ ವಿಚಾರವಾಗಿ ವಿದ್ಯಾರ್ಥಿನಿಯೊಬ್ಬಳು ಕೋರ್ಟ್ ಮೆಟ್ಟಿಲೆರಿದ್ದಾಳೆ.










