ಹಿಜಾಬ್ ತೆಗೆಯಲ್ಲ ಎಂದು ಪಟ್ಟು – ಪರೀಕ್ಷೆ ಬರೆಯದೆ ಮನೆಗೆ ವಾಪಸ್ ಆದ ವಿದ್ಯಾರ್ಥಿನಿಯರು.

69
firstsuddi

ಶಿವಮೊಗ್ಗ : ಹಿಜಾಬ್ ವಿವಾದ ಮಧ್ಯೆ ಇಂದಿನಿಂದ 9 ಮತ್ತು 10ನೇ ತರಗತಿಗೆ ಶಾಲೆ ಪುನಾರಂಭವಾಗಿದೆ. ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಿತ್ತು. ಆದರೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದೇ ಹಿಜಾಬ್ ಧರಿಸಿಯೇ ಬಂದಿದ್ದಾರೆ. ಈ ಮಧ್ಯೆ ನಗರದಲ್ಲಿ 13 ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಮುಖ್ಯವಲ್ಲ, ಧರ್ಮ ಮುಖ್ಯ. ನಾವು ಹಿಜಾಬ್ ತೆಗೆಯಲ್ಲ ಎಂದು ತರಗತಿಯಿಂದ ಹೊರ ನಡೆದಿದ್ದಾರೆ.

ಶಿವಮೊಗ್ಗದ ಬಿ.ಎಚ್.ರಸ್ತೆಯ ಸರ್ಕಾರಿ ಪಬ್ಲಿಕ್ ಪ್ರೌಢಶಾಲೆಯಲ್ಲಿ ಇಂದು ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ 13 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಈ ವೇಳೆ ಶಿಕ್ಷಕರು ಎಲ್ಲರೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಬ್ ತೆಗೆದರೆ ತರಗತಿಯಲ್ಲಿ ಇರಿ, ಇಲ್ಲದಿದ್ದರೆ ಹೊರಗೆ ಹೋಗಿ ಎಂದಿದ್ದಾರೆ. ಆದರೆ, ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಲು ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಶಿಕ್ಷಕರು ಅವಕಾಶ ನೀಡದ ಕಾರಣ ಪರೀಕ್ಷೆಯನ್ನೇ ಬಹಿಷ್ಕರಿಸಿ ಮನೆಗೆ ವಾಪಸ್ ಆಗಿದ್ದಾರೆ.