ಹಿರೇಮಗಳೂರು ಕೆರೆ ಸ್ವಚ್ಛತಾ ಕಾಮಗಾರಿ – ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯ…

111
firstsuddi

ಚಿಕ್ಕಮಗಳೂರು : ಹಿರೇಮಗಳೂರು ಕೆರೆಯ ಸ್ವಚ್ಛತಾ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್ ಒತ್ತಾಯಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಿನ್ನೆ ನಡೆದ ಶ್ರೀ ಗಂಗಾ ಪ.ಜಾತಿ/ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರೇಮಗಳೂರು ಕೆರೆಯ ಸ್ವಚ್ಛತಾ ಕಾಮಗಾರಿಯನ್ನು ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕೆರೆಯಲ್ಲಿ ಬೆಳೆದು ನಿಂತಿದ್ದ ಜೊಂಡು ಮತ್ತು ಅಂತರಗಂಗೆ ಸೊಪ್ಪನ್ನು ಅಲ್ಪ ಪ್ರಮಾಣದಲ್ಲಿ ಮಾತ್ರ ತೆರವುಗೊಳಿಸಿ ಉಳಿದ ಜೊಂಡನ್ನು ಹಾಗೇ ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಇದರಿಂದಾಗಿ ಜೊಂಡು ಮತ್ತು ಅಂತರಗಂಗೆ ಸೊಪ್ಪು ಇಡೀ ಕೆರೆಯನ್ನು ಆವರಿಸಿದೆ ಅದರ ಪರಿಣಾಮ ಆಮ್ಲಜನಕದ ಕೊರತೆಯಿಂದಾಗಿ ಮೀನುಗಳು ಸಾವನ್ನಪ್ಪಿದ್ದು, ಮೀನುಸಾಕಾಣಿಕೆಯನ್ನು ಹರಾಜಿನಲ್ಲಿ ಪಡೆದಿರುವ ಬಡ ಮೀನುಗಾರರು ಆರ್ಥಿಕ ನಷ್ಟ ಅನುಭವಿಸಿದ್ದಾರೆ ಎಂದು ದೂರಿದರು.

ಬೇಕಾಬಿಟ್ಟಿ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು, ಕೆರೆಯಲ್ಲಿ ಬೆಳೆದಿರುವ ಜೊಂಡನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದ ಅವರು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ ಮಾತನಾಡಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಪ.ಜಾತಿ/ಪ.ವರ್ಗದ ಮೀನುಗಾರರಿಗೆ ಸರ್ಕಾರದ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

ಐವತ್ತು ಸಾವಿರ ರೂ ಸಾಲ ನೀಡುವುದಾಗಿ ಕಳೆದ ವರ್ಷ ಮೀನುಗಾರರಿಂದ ಅರ್ಜಿ ಪಡೆದಿರುವ ಮೀನುಗಾರಿಕೆ ಇಲಾಖೆ ಇದುವರೆಗೂ ಸಾಲ ನೀಡಿಲ್ಲ ಎಂದು ದೂರಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಧರ್ಮೇಶ್ ನಗರದ ದಂಟರಮಕ್ಕಿ ಕೆರೆಯನ್ನು ಮೀನು ಸಾಕಾಣಿಕೆಗಾಗಿ ಹರಾಜಿನಲ್ಲಿ ಗುತ್ತಿಗೆ ಪಡೆದು ಹಣ ಪಾವತಿಸಿದ್ದರೂ ಇದುವರೆಗೂ ಮೀನುಗಾರಿಕೆ ಇಲಾಖೆ ಕೆರೆಯನ್ನು ಸಂಘದ ಸುಪರ್ದಿಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀನುಗಾರಿಕೆ ಇಲಾಖೆಯ ಈ ಕ್ರಮದಿಂದಾಗಿ ಬಡ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ ಎಂದ ಅವರು ಪ.ಜಾತಿ/ಪ.ವರ್ಗದ ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು ನೀಡುವ ಸಾಲದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಂಘದ ಸಹಕಾರ್ಯದರ್ಶಿ ನಟರಾಜ್ ವಾರ್ಷಿಕ ವರದಿಯನ್ನು ಮಂಡಿಸಿದರು, ಉಪಾಧ್ಯಕ್ಷ ರಾಮಯ್ಯ, ನಿರ್ದೇಶಕರಾದ ಮಂಜು, ಮುತ್ತು, ಚಂದ್ರಪ್ಪ, ಟಿ.ರಾಮಚಂದ್ರ, ಮುನೇಶ್ವರ, ಮೋಹನಕುಮಾರಿ, ರಾಧಮ್ಮ , ಮೀನುಗಾರಿಕೆ ಇಲಾಖೆಯ ಅಧಿಕಾರಿ ಶಾಂತೇಗೌಡ ಉಪಸ್ಥಿತರಿದ್ದರು.