ಹುಬ್ಬಳ್ಳಿ : ಹುಬ್ಬಳ್ಳಿಯ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗ್ತಿರುವ ಮೌಲ್ವಿ ಮೌಲಾನಾ ವಾಸಿಂ ಪಠಾಣ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ವಾಸಿಂ ವೀಡಿಯೋ ರಿಲೀಸ್ ಮಾಡುತ್ತಿದ್ದಂತೆ ಹುಬ್ಬಳ್ಳಿ ಕೇಶ್ವಾಪೂರ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ತಂಡವು ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಕಳೆದ ಶನಿವಾರ ರಾತ್ರಿ ಗಲಭೆ ವೇಳೆಯಲ್ಲಿ ಪೊಲೀಸ್ ಜೀಪ್ ಹತ್ತಿ ಸಮುದಾಯದ ಯುವಕರಿಗೆ ಪ್ರಚೋದನೆ ನೀಡಿರುವ ಗಂಭೀರ ಆರೋಪ ವಾಸೀಂ ಪಠಾಣ್ ಮೇಲಿದೆ. ಗಲಭೆ ಬಳಿಕ ಇವರು ನಾಪತ್ತೆಯಾಗಿದ್ದರು. ಆದರೆ ಇಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮಾತನಾಡಿ, ನಮ್ಮ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು. ಜನರ ಜೊತೆಗೆ ಮಾತನಾಡಲು ನನ್ನನ್ನು ಕರೆಸಿದ್ದರು. ಪೊಲೀಸರ ಜೊತೆಗೆ ಮಾತನಾಡಿದೆ. ಪೊಲೀಸರು ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು. ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ. ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ಹೇಳಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ನಾನೇ ಅದರ ಪಿತೂರಿದಾರ ಎಂದು ಬಿಂಬಿಸಲಾಗುತ್ತಿದೆ. ನಾನು ಘಟನೆ ಮಾಸ್ಟರ್ ಮೈಂಡ್ ಅಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ನನಗೆ ಭರವಸೆ ಇದೆ. ಪೊಲೀಸರ ಮುಂದೆ ಹಾಜರಾಗಿ ನನ್ನ ಹೇಳಿಕೆ ಕೊಡುತ್ತೇನೆ. ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ. ಜನರನ್ನು ನಿಯಂತ್ರಿಸುವ ಕಾರ್ಯ ಮಾಡಿದೆ. ನಿಮ್ಮ ನಿಮ್ಮ ಮನೆಗೆ ವಾಪಸ್ ಹೋಗಿ ಎಂದು ಅಲ್ಲಿ ನೆರೆದಿದ್ದ ಯುವಕರಿಗೆ ಹೇಳುತ್ತಿದ್ದೆ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ವಾಸಿಂ ಪಠಾಣ್ ಹೇಳಿದ್ದರು.










