ಬೆಂಗಳೂರು : ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ಹೊಸ ವರ್ಷದ ಬಂಪರ್ ಕೊಡುಗೆ ನೀಡಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟಕ್ಕೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದ್ದು, ಇನ್ನು ಮುಂದೆ 10 ವರ್ಷಗಳ ಅವಧಿಗೆ ಕೈಗಾರಿಕಾ ಉದ್ದೇಶಗಳಿಗೆ ನೀಡಲಾದ ಜಮೀನನ್ನು ಲೀಸ್ ಕಂ ಸೇಲ್ ಗೆ ನೀಡಲು ಸಮ್ಮತಿಸಲಾಗಿದೆ. ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಬಂಡವಾಳ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಸುಲಲಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಕೆಐಎಡಿಬಿಯಿಂದ ಕೇವಲ 99 ವರ್ಷಗಳ ಲೀಸ್ ಆಧಾರದ ಮೇಲೆ 2 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡುವುದರಿಂದ ಹಲವಾರು ಪ್ರಮುಖ ಖಾಸಗಿ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದವು. ಮಂಜೂರು ಮಾಡಿದ ಭೂಮಿಯನ್ನು ಮಾರಾಟ ಮಾಡಲು ಎಂದಿಗೂ ಅವಕಾಶವಿರಲಿಲ್ಲ. ಕೈಗಾರಿಕೆಗಳಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು ಬಂಡವಾಳದ ಒಳಹರಿವು ಪಡೆಯಲು ಹಾಗೂ ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನಗೊಳಿಸಲು ತೊಂದರೆಗಳು ಎದುರಾಗಿತ್ತು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹೂಡಿಕೆಯ ಹರಿವಿಗೆ ಅಡ್ಡಿಯಾಗಿದ್ದರಿಂದ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಯ ಮೂಲಕ ಯಾವುದೇ ಕೈಗಾರಿಕಾ ಘಟಕವು ಭೂ ಹಂಚಿಕೆಯ ನಂತರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ಅವರು ಹತ್ತು ವರ್ಷಗಳವರೆಗೆ ಕಾಯದೆ ಕೆಐಎಡಿಬಿಯಿಂದ ಮಾರಾಟ ಪತ್ರದ ಶೀರ್ಷಿಕೆಯನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಇಲಾಖೆಯು ತನ್ನ ಅಧಿಕಾರಿಗಳ ಮೂಲಕ ಉದ್ಯಮದ 24 ತಿಂಗಳ ಬ್ಯಾಲೆನ್ಸ್ ಶೀಟ್ ಪರಿಶೀಲಿಸಿ ಎಲ್ಲವೂ ನಿಯಮಬದ್ಧವಾಗಿದ್ದರೆ, ಸೇಲ್ ಡೀಡ್ ಕೊಡಲಾಗುತ್ತದೆ. ಇದರಿಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಅನುಕೂಲವಾಗುತ್ತದೆ.










