ಮಂಡ್ಯ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಲು ಬಂದಿದ್ದಕ್ಕೆ ಕಾರ್ಯಕರ್ತನ ತಲೆಗೆ ಹೊಡೆದಿರುವ ಘಟನೆ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ.
ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯವನ್ನು ವಿಚಾರಿಸಲು ಡಿ.ಕೆ.ಶಿವಕುಮಾರ್ ಅವರು ಆಗಮಿಸಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಅಂತ ಬಾರಿಸಿ ನಿನಗೆ ಕಾಮನ್ ಸೆನ್ಸ್ ಇಲ್ಲವಾ? ಹೆಗಲ ಮೇಲೆ ಕೈ ಹಾಕ್ತಿಯಲ್ಲ ಎಂದು ಡಿಕೆಶಿ ಗದರಿದರು. ಬಳಿಕ ವೀಡಿಯೋ ಮಾಡುತ್ತಿದ್ದವರಿಗೆ ವಿಡಿಯೋ ಡಿಲೀಟ್ ಮಾಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಡಿಕೆಶಿ ಅವರು ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾದರು.










