ಧಾರವಾಡ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ(96) ಅವರು ಖಾಸಗಿ ಆಸ್ಪತ್ರೆಯಲ್ಲೇ ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ನಾಡಿನ ಹೆಸರಾಂತ ಸಾಹಿತಿಯಾಗಿದ್ದ ಗುರುಲಿಂಗ ಕಾಪಸೆ ಅವರ ಮೂಲ ಊರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮ. ಸದ್ಯ ಧಾರವಾಡದ ಸಪ್ತಾಪುರ ದುರ್ಗಾ ಕಾಲೋನಿಯಲ್ಲಿ ನೆಲೆಸಿದ್ದರು. ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದರು.
1928ರ ಎಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನ 2ರವರೆಗೆ ದುರ್ಗಾ ಕಾಲೋನಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುಲಿಂಗ ಕಾಪಸೆ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಅಭಿಮಾನಿ ಬಳಗವನ್ನಗಲಿದ್ದಾರೆ.
ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದರು. ಮಧುರ ಚೆನ್ನರ ಜೀವನ ಹಾಗೂ ಕೃತಿಗಳ ಕುರಿತ ಮಹಾಪ್ರಬಂಧ ರಚಿಸಿದ್ದರು. ಮಧುರ ಚೆನ್ನ, ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡ ಅನುವಾದ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕಾಪಸೆಯವರು ದ.ರಾ.ಬೇಂದ್ರೆ, ಮಧುರ ಚೆನ್ನ ಸೇರಿ ಹಲವು ಸಾಹಿತಿಗಳ ಒಡನಾಡಿಯಾಗಿದ್ದರು.
ಕಾಪಸೆಯವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭ ಮಾಡಿದ ಕಾಪಸೆ ಕಾಲಾಂತರದಲ್ಲಿ ಧಾರವಾಡಕ್ಕೆ ಬಂದು ನೆಲೆಸಿದ್ದರು.










